ಹೊಸದಿಗಂತ ವರದಿ ಬೀದರ್:
ಶಿಕ್ಷಣ, ಭೂಮಿಯ ಒಡೆತನ ಮತ್ತು ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ಹಿಂದುಳಿದಿದೆ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಸಮುದಾಯದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಧ್ವನಿಯಾಗಲು ಸ್ವಂತ ರಾಜಕೀಯ ನಾಯಕತ್ವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ಕರೆ ನೀಡಿದ್ದಾರೆ.
ಬೀದರ್ ಜಿಲ್ಲೆಯ ಬಗದಲ್ ಗ್ರಾಮದಲ್ಲಿ ನಡೆದ ಎಐಎಂಐಎಂ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಓವೈಸಿ, ರಾಜಕೀಯ ಪ್ರಾತಿನಿಧ್ಯ ಹೊಂದಿರುವ ಸಮುದಾಯಗಳಿಗೆ ಮಾತ್ರ ಗೌರವ ಮತ್ತು ಅಧಿಕಾರದಲ್ಲಿ ಪಾಲು ದೊರೆಯುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನಾಯಕತ್ವದ ಕೊರತೆಯಿರುವ ಸಮುದಾಯಗಳನ್ನು ಚುನಾವಣೆ ಸಂದರ್ಭದಲ್ಲಿ ಮತದಾನಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದಿರುವಿಕೆ
ದಲಿತ ಮತ್ತು ಆದಿವಾಸಿ ಸಮುದಾಯಗಳ ನಂತರ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಮುಸ್ಲಿಂ ಸಮುದಾಯದಲ್ಲಿ ಹೆಚ್ಚಿದೆ ಎಂದು ಓವೈಸಿ ಹೇಳಿದರು. ಭೂಮಿಯ ಒಡೆತನ ಮತ್ತು ಸರ್ಕಾರಿ ಉದ್ಯೋಗಗಳಲ್ಲಿಯೂ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಇದೆ ಎಂದು ಅವರು ಉಲ್ಲೇಖಿಸಿದರು.
ಸಮುದಾಯದ ಅಭಿವೃದ್ಧಿಗೆ ಶಿಕ್ಷಣ, ಆರ್ಥಿಕ ಪ್ರಗತಿ ಮತ್ತು ರಾಜಕೀಯ ಪ್ರಾತಿನಿಧ್ಯ ಮುಖ್ಯವಾಗಿದ್ದು, ಈ ಕ್ಷೇತ್ರಗಳಲ್ಲಿ ಮುನ್ನಡೆಯಲು ಸಂಘಟಿತ ಪ್ರಯತ್ನ ಅಗತ್ಯ ಎಂದು ತಿಳಿಸಿದರು.
ಇದನ್ನೂ ಓದಿ:
ರಾಜಕೀಯ ನಾಯಕತ್ವ ಬೆಳೆಸಲು ಕರೆ
ನಮ್ಮ ಸಮುದಾಯದ ರಾಜಕೀಯ ನಾಯಕರನ್ನು ನಾವೇ ರೂಪಿಸಬೇಕು ಎಂದು ಹೇಳಿದ ಓವೈಸಿ, ಮುಸ್ಲಿಂ ಸಮುದಾಯದಲ್ಲಿ ಬಲಿಷ್ಠ ನಾಯಕತ್ವ ಬೆಳೆದರೆ ದೇಶದ ಪ್ರಜಾಪ್ರಭುತ್ವವೂ ಮತ್ತಷ್ಟು ಬಲಗೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮತದಾನದ ಮೂಲಕ ಅಧಿಕಾರಕ್ಕೆ ಬರುವವರು ಸಮುದಾಯದ ಸಮಸ್ಯೆಗಳಿಗೂ ಸ್ಪಂದಿಸಬೇಕು ಎಂದು ಹೇಳಿದರು.
ಆರೆಸ್ಸೆಸ್ ವಿರುದ್ಧ ಟೀಕೆ
ಭಾರತದಲ್ಲಿ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಓವೈಸಿ, ದೇಶದ ಮೇಲೆ ಎಲ್ಲ ಸಮುದಾಯಗಳಿಗೂ ಸಮಾನ ಹಕ್ಕು ಇದೆ ಎಂದು ಪ್ರತಿಪಾದಿಸಿದರು. ಆರೆಸ್ಸೆಸ್ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರದ ಕುರಿತು ಪ್ರಶ್ನೆ ಎತ್ತಿದರು.



