November 3, 2026
Tuesday, November 3, 2026
spot_img

ಬರ ಪರಿಹಾರಕ್ಕೆ 22,400 ಕೋಟಿ ರೂ. ಬೇಡಿಕೆ: ಪ್ರಧಾನಿ ಮೋದಿ ಭೇಟಿಗೆ ಡಾ. ಜಿ. ಪರಮೇಶ್ವರ್ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಬರದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ನೆರವು ಒದಗಿಸಲು ಕೇಂದ್ರ ಸರ್ಕಾರ ತುರ್ತಾಗಿ 22,400.58 ಕೋಟಿ ಪರಿಹಾರ ಬಿಡುಗಡೆ ಮಾಡಬೇಕೆಂದು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ನವೆಂಬರ್ 2ರಂದು ಪ್ರತ್ಯೇಕ ಪತ್ರ ಬರೆದಿದ್ದು, ರಾಜ್ಯದ ಪರಿಷ್ಕೃತ ಬರ ಪರಿಹಾರ ಮನವಿ ಮಂಡಿಸಲು ತುರ್ತು ಭೇಟಿಗೆ ಸಮಯ ನೀಡುವಂತೆ ಕೋರಿದ್ದಾರೆ.

226 ತಾಲೂಕುಗಳಲ್ಲಿ ಬರದ ಹೊಡೆತ

ರಾಜ್ಯ ಸರ್ಕಾರದ ಪರಿಷ್ಕೃತ ಮನವಿಯ ಪ್ರಕಾರ, ಕರ್ನಾಟಕದ 226 ತಾಲೂಕುಗಳು ಬರದಿಂದ ತೀವ್ರವಾಗಿ ಬಾಧಿತವಾಗಿವೆ. ಸುಮಾರು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಳಗಾಗಿದ್ದು, ಒಟ್ಟು ಆರ್ಥಿಕ ನಷ್ಟವನ್ನು 62,481.88 ಕೋಟಿ ಎಂದು ಅಂದಾಜಿಸಲಾಗಿದೆ. ಆರಂಭದಲ್ಲಿ 20,585.73 ಕೋಟಿ ಪರಿಹಾರ ಅಗತ್ಯವಿದೆ ಎಂದು ಸಲ್ಲಿಸಿದ್ದ ಮನವಿಯನ್ನು ಕೇಂದ್ರದ ಹೊಸ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ 22,400.58 ಕೋಟಿಗೆ ಹೆಚ್ಚಿಸಲಾಗಿದೆ.

ಹೊಸ ಮಾನದಂಡದಿಂದ 1,814 ಕೋಟಿ ಹೆಚ್ಚುವರಿ ಅಗತ್ಯ

ಕೇಂದ್ರ ಗೃಹ ಸಚಿವಾಲಯ ಅಕ್ಟೋಬರ್ 26ರಂದು ಪ್ರಕಟಿಸಿದ 2026-27ರಿಂದ 2030-31ರವರೆಗಿನ SDRF ಮತ್ತು NDRF ನೆರವಿನ ಪರಿಷ್ಕೃತ ಮಾನದಂಡಗಳಿಂದ ಬೆಳೆ ನಷ್ಟದ ಇನ್‌ಪುಟ್ ಸಬ್ಸಿಡಿ ಅಗತ್ಯ 6,128.70 ಕೋಟಿಯಿಂದ 7,943.55 ಕೋಟಿಗೆ ಏರಿಕೆಯಾಗಿದೆ. ಇದರಿಂದ ರಾಜ್ಯದ ಪರಿಹಾರ ಬೇಡಿಕೆಗೆ ಹೆಚ್ಚುವರಿ 1,814.85 ಕೋಟಿ ಸೇರ್ಪಡೆಯಾಗಿದೆ.

ಇದನ್ನೂ ಓದಿ:

ಪರಿಹಾರ ದರ ಕೃಷಿ ವೆಚ್ಚಕ್ಕೆ ತಕ್ಕಂತಿಲ್ಲ

ಪರಿಷ್ಕೃತ ನೆರವು ದರಗಳು ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್‌ಗೆ 11,000, ನೀರಾವರಿ ಬೆಳೆಗಳಿಗೆ 22,000 ಹಾಗೂ ಬಹುವಾರ್ಷಿಕ ಬೆಳೆಗಳಿಗೆ 30,000 ಎಂದು ನಿಗದಿಯಾಗಿವೆ. ಆದರೆ ಬೀಜ, ಗೊಬ್ಬರ, ಕೃಷಿ ಕಾರ್ಮಿಕರು ಮತ್ತು ನೀರಾವರಿ ವೆಚ್ಚಗಳನ್ನು ಪರಿಗಣಿಸಿದರೆ ಈ ಮೊತ್ತ ಸಾಕಾಗುವುದಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

FRUITS ದತ್ತಾಂಶ ಬಳಕೆಗೆ ಆಗ್ರಹ

2015-16ರ ಕೃಷಿ ಗಣತಿ ಆಧಾರಿತ ಭೂಹಿಡುವಳಿ ಮಾಹಿತಿ ಹಳೆಯದಾಗಿದ್ದು, ಅರ್ಹ ಸಣ್ಣ ಮತ್ತು ಅತಿಸಣ್ಣ ರೈತರು ಪರಿಹಾರದಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ರೈತರ ನವೀಕೃತ ಮಾಹಿತಿ ಹೊಂದಿರುವ FRUITS ದತ್ತಾಂಶವನ್ನು ಬಳಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

Must Read

Skip to toolbar