November 4, 2026
Wednesday, November 4, 2026
spot_img

ರೈಲು ಹಳಿ ದಾಟಿದ ಕೆಲವೇ ಸಮಯದಲ್ಲಿ ಭೀಕರ ಸ್ಫೋಟ: ಭಾರತ-ಪಾಕ್‌ ಗಡಿ ಸಮೀಪ ಘಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ -ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಸಮೀಪವೇ ಇರುವ ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿರುವ ರೈಲ್ವೆ ಹಳಿಯ ಮೇಲೆ ಭಾರೀ ಸ್ಫೋಟ ಸಂಭವಿಸಿದೆ.

ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಅನೂಪ್‌ಗಢದಿಂದ ಸೂರತ್‌ಗಢಕ್ಕೆ ತೆರಳುತ್ತಿದ್ದ ರೈಲು ಹಳಿಯನ್ನು ದಾಟಿದ ಅರ್ಧ-ಮುಕ್ಕಾಲು ಗಂಟೆ ಮಧ್ಯದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯ ಅನೂಪ್‌ಗಢ ಹಾಗೂ ಸೂರತ್‌ಗಢ ನಡುವಿನ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.

ಸ್ಫೋಟದ ತೀವ್ರತೆ ಹೆಚ್ಚಾಗಿದ್ದು, ಬರೋಬ್ಬರಿ 200 ಮೀಟರ್ ದೂರದವರೆಗೂ ಸದ್ದು ಕೇಳಿಬಂದಿದೆ. ಅಲ್ಲದೆ, ಹಳಿಯ ಕೆಳಭಾಗದಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದೆ. ಭೀಕರ ಸ್ಫೋಟದಲ್ಲಿ ಹಳಿಗೆ ಆಧಾರವಾಗಿದ್ದ ಎರಡು ಕಾಂಕ್ರೀಟ್‌ ಪಿಲ್ಲರ್‌ಗಳು ಹಾಗೂ ದಿಮ್ಮಿಗಳು ಜಖಂಗೊಂಡಿವೆ. ರೈಲು ಚಲಿಸುವ ಸಮಯದಲ್ಲಿ ಸ್ಫೋಟ ಸಂಭವಿಸಿದ್ದರೆ ನೂರಾರು ಮಂದಿಯ ಪ್ರಾಣಕ್ಕೆ ಅಪಾಯವಾಗುತ್ತಿತ್ತು ಎಂದು ಅಂದಾಜಿಸಲಾಗಿದೆ.

ಸದ್ಯ ಸ್ಥಳಕ್ಕೆ ಭಯೋತ್ಪಾದನಾ ನಿಗ್ರಹ ದಳ, ಅಪರಾಧ ತನಿಖಾ ಇಲಾಖೆ, ಶ್ವಾನದಳ, ರೈಲ್ವೆ ಅಧಿಕಾರಿಗಳು ಹಾಗೂ ವಿವಿಧ ಭದ್ರತಾ ಸಂಸ್ಥೆಗಳ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿವೆ.

Must Read