ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ದೊಡ್ಡ ಮಟ್ಟದ ಟ್ರೇಡಿಂಗ್ಗೆ ವೇದಿಕೆ ಸಿದ್ಧವಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಸಕಲ ಸಿದ್ಧತೆ ನಡೆಸಿತ್ತು. ಹಾರ್ದಿಕ್ ಬದಲಿಗೆ ಸ್ಟಾರ್ ವೇಗಿ ಅರ್ಷದೀಪ್ ಸಿಂಗ್ ಹಾಗೂ ವಿಷ್ಣು ವಿನೋದ್ ಅವರನ್ನು ಮುಂಬೈಗೆ ಬಿಟ್ಟುಕೊಡಲು ಪಂಜಾಬ್ ಒಪ್ಪಿಕೊಂಡಿತ್ತು. ಆದರೆ, ಈ ಡೀಲ್ ಅಂತಿಮ ಹಂತ ತಲುಪುವಷ್ಟರಲ್ಲೇ ರಾಜಸ್ಥಾನ್ ರಾಯಲ್ಸ್ ಮಧ್ಯಪ್ರವೇಶಿಸಿ, ಹೈ-ಪ್ರೊಫೈಲ್ ಆಫರ್ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದೆ.
ಹಾರ್ದಿಕ್ ಪಾಂಡ್ಯ ಅವರನ್ನು ಯಾವುದೇ ಬೆಲೆ ತೆತ್ತಾದರೂ ತನ್ನ ಟೀಮ್ ಗೆ ತೆಗೆದುಕೊಳ್ಳಲು ರಾಜಸ್ಥಾನ್ ರಾಯಲ್ಸ್ ನಿರ್ಧರಿಸಿದೆ. ಇದಕ್ಕಾಗಿ ಯುವ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ಸ್ಟಾರ್ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಇಬ್ಬರನ್ನೂ ಮುಂಬೈಗೆ ಬಿಟ್ಟುಕೊಡಲು ಸಿದ್ಧ ಎಂಬ ಬಿಗ್ ಆಫರ್ ಇಟ್ಟಿದೆ.
ರೋಹಿತ್ ಶರ್ಮಾ ನಂತರ ಬಲಿಷ್ಠ ಭಾರತೀಯ ಓಪನರ್ ಹುಡುಕಾಟದಲ್ಲಿದ್ದ ಮುಂಬೈಗೆ ಜೈಸ್ವಾಲ್ ಸೇರ್ಪಡೆ ದೊಡ್ಡ ಬಲ ನೀಡಲಿದೆ. ಹೀಗಾಗಿ, ಪಂಜಾಬ್ ಜೊತೆಗಿನ ಡೀಲ್ ಸದ್ಯಕ್ಕೆ ತಡೆಹಿಡಿದು, ಮುಂಬೈ ಮ್ಯಾನೇಜ್ಮೆಂಟ್ ರಾಜಸ್ಥಾನ್ ಆಫರ್ ಬಗ್ಗೆ ತುರ್ತು ಚರ್ಚೆ ಆರಂಭಿಸಿದೆ.
ರಾಜಸ್ಥಾನ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಪಂದ್ಯ ಗೆಲ್ಲಿಸಿಕೊಡುವ ಆಲ್ ರೌಂಡರ್ ಹಾಗೂ ಚಾಂಪಿಯನ್ ಪಟ್ಟ ತಂದುಕೊಟ್ಟ ಅನುಭವಿ ಆಟಗಾರ ಹಾರ್ದಿಕ್ ಮೇಲೆ ಕಣ್ಣಿಟ್ಟಿದೆ. ಹಾಗೆಯೇ, ತಂಡದಲ್ಲಿ ವೈಭವ್ ಸೂರ್ಯವಂಶಿ ಅವರಂತಹ ಯುವ ತಾರೆ ಇರುವುದರಿಂದ ಜೈಸ್ವಾಲ್ ಬಿಡುಗಡೆ ಆರ್ ಆರ್ ಗೆ ದೊಡ್ಡ ನಷ್ಟವೇನಲ್ಲ. ಇತ್ತ ಮೂಲತಃ ಮುಂಬೈ ಆಟಗಾರನಾಗಿರುವ ಜೈಸ್ವಾಲ್ ಕೂಡ ತಮ್ಮ ತವರು ಫ್ರಾಂಚೈಸಿ ಪರ ಆಡಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಈ ಮೆಗಾ ಡೀಲ್ ಅಂತಿಮಗೊಂಡರೆ ಐಪಿಎಲ್ 2027ರ ಚಿತ್ರಣ ಸಂಪೂರ್ಣ ಬದಲಾಗುವುದು ಖಚಿತ.



