ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರೀ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ಅಂದರೆ ನಾಳೆ ವಿಶ್ವದಾದ್ಯಂತ ತೆರೆಕಾಣುತ್ತಿದೆ. ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿರುವ ಈ ಚಿತ್ರ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಹಾಗೂ ಮೀಮ್ಸ್‌ಗಳ ಸುರಿಮಳೆಗೂ ಗುರಿಯಾಗಿದೆ. ಈ ಎಲ್ಲಾ ನೆಗೆಟಿವ್ ಚರ್ಚೆಗಳಿಗೆ ನಟ ರಣ್‌ಬೀರ್ ಕಪೂರ್ ಹಾಗೂ ಚಿತ್ರತಂಡದ ಪ್ರಮುಖರು ಈಗ ದಿಟ್ಟ ಉತ್ತರ ನೀಡಿದ್ದಾರೆ.
ಐಐಎಂಯುಎನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಟ ರಣ್‌ಬೀರ್ ಕಪೂರ್, ಟ್ರೋಲ್‌ಗಳ ಕುರಿತು ಮಾತನಾಡುತ್ತಾ ಪ್ರಸಿದ್ಧ ಹಿಂದಿ ಗೀತೆ ‘ಕುಛ್ ತೋ ಲೋಗ್ ಕಹೇಂಗೆ, ಲೋಗೋ ಕಾ ಕಾಮ್ ಹೈ ಕೆಹನಾ’ ಸಾಲನ್ನು ನೆನಪಿಸಿಕೊಂಡರು. “ಜನರು ಏನೇನೋ ಮಾತನಾಡುತ್ತಲೇ ಇರುತ್ತಾರೆ, ಅದಕ್ಕೆ ತಲೆಕೆಡಿಸಿಕೊಳ್ಳದಿರುವುದೇ ಜೀವನದ ಅತ್ಯುತ್ತಮ ತತ್ವ. ನಮ್ಮ ಕೆಲಸ, ಉದ್ದೇಶ ಮತ್ತು ನಮ್ಮ ಒಳ್ಳೆಯತನವನ್ನು ಮೆಚ್ಚುವವರ ಮಾತುಗಳು ಮಾತ್ರ ನಮಗೆ ಮುಖ್ಯವಾಗಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಮಾತನಾಡಿ, “ನಾವು ಮಾಡುವ ಪ್ರಯತ್ನವು ನೂರಕ್ಕೆ ನೂರು ಪ್ರಾಮಾಣಿಕತೆಯಿಂದ ಕೂಡಿದ್ದರೆ, ಬೇರೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕಿಲ್ಲ” ಎಂದಿದ್ದಾರೆ.
ಇನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಟ್ರೋಲ್‌ಗಳನ್ನು ತಮಾಷೆಯಾಗಿ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನೆಗೆಟಿವ್ ಕಾಮೆಂಟ್‌ಗಳಿದ್ದರೂ, ಚಿತ್ರಕ್ಕೆ ಸಿಗುತ್ತಿರುವ ಒಟ್ಟಾರೆ ಮೆಚ್ಚುಗೆ ಮತ್ತು ಪ್ರೀತಿ ಅಪಾರವಾಗಿದೆ ಎಂದು ಅವರು ಹರುಷ ವ್ಯಕ್ತಪಡಿಸಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ ನಡೆದ ‘ರಾಮಾಯಣ’ ಸಿನಿಮಾದ ವಿಶೇಷ ಪ್ರೀಮಿಯರ್ ಪ್ರದರ್ಶನದ ಬಳಿಕ ಕೆಲವು ಕಡೆ ನೆಗೆಟಿವ್ ಕಮೆಂಟ್‌ಗಳು ಕೇಳಿಬಂದಿದ್ದವು. ಆದರೂ, ಖ್ಯಾತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಹಾಗೂ ಎ.ಆರ್. ರೆಹಮಾನ್ ಅವರ ಅದ್ಭುತ ಸಂಗೀತ ಸಂಯೋಜನೆಗೆ ಪ್ರತಿಷ್ಠಿತ ‘ಇಂಡಿವೈರ್’ ಸಂಸ್ಥೆ ಮುಕ್ತಕಂಠದಿಂದ ಶ್ಲಾಘಿಸಿದೆ. ಸಿನಿಮಾದ ದೃಶ್ಯ ವೈಭವಗಳು ಹಾಗೂ ರೋಮಾಂಚನಕಾರಿ ಯುದ್ಧದ ಸನ್ನಿವೇಶಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಲಿದೆ ಎಂದು ವಿಮರ್ಶೆಯಲ್ಲಿ ಮುಕ್ತವಾಗಿ ಪ್ರಶಂಸಿಸಲಾಗಿದೆ.
ಒಟ್ಟಾರೆಯಾಗಿ, ಎಲ್ಲಾ ವಿರೋಧಗಳ ನಡುವೆಯೂ ‘ರಾಮಾಯಣ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.



