ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ರಾಜ್ಯದ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಪ್ರತಿನಿಧಿಗಳ ಸಭೆಯಲ್ಲಿ ಸರ್ಕಾರದ ನೂತನ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲ ಹಂತದಲ್ಲಿ 1,000 ಶಾಲೆಗಳ ಜೋಡಣೆ ಗುರಿ
ರಾಜ್ಯ ಸರ್ಕಾರವು ಹೊಸ ಸಿಎಸ್ಆರ್ (CSR) ನೀತಿಯನ್ನು ಜಾರಿಗೆ ತಂದಿದ್ದು, ಮೊದಲ ಹಂತದಲ್ಲಿ 1,000 ಸರ್ಕಾರಿ ಶಾಲೆಗಳನ್ನು ಪ್ರಮುಖ ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಒಟ್ಟಾರೆಯಾಗಿ 2,000 ಶಾಲೆಗಳನ್ನು ಈ ಯೋಜನೆಯಡಿ ತರಲು ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕಾಗಿ 6,000 ಪಂಚಾಯತ್ಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮುಂದಿನ 4-5 ವರ್ಷಗಳಲ್ಲಿ ಈ ಪ್ರಯತ್ನ ಉತ್ತಮ ಫಲಿತಾಂಶ ನೀಡಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಕೇವಲ ಹಣ ನೀಡುವುದಷ್ಟೇ ಅಲ್ಲ
ಖಾಸಗಿ ಶಾಲೆಗಳು ಕೇವಲ ಹಣಕಾಸು ಅಥವಾ ಕಟ್ಟಡ ನಿರ್ಮಾಣಕ್ಕೆ ನೆರವು ನೀಡುವುದು ಮಾತ್ರವಲ್ಲದೆ, ತಮ್ಮ ನುರಿತ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಿ ಜ್ಞಾನ ವಿನಿಮಯ ಮಾಡಿಕೊಳ್ಳಬಹುದು. ಶಾಲೆಗಳಲ್ಲಿ ಲ್ಯಾಬ್ ಪರಿಕರಗಳು, ಕಂಪ್ಯೂಟರ್ಗಳು ಅಥವಾ ಖಾಸಗಿ ಶಾಲೆಗಳ ಹಳೆಯ ಬಸ್ಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಿ ನೆರವಾಗಬಹುದು.
ಶಾಲೆಗಳ ಹೆಸರಿನ ಜೊತೆ ಬ್ರ್ಯಾಂಡ್ ಜೋಡಣೆ
ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆಯ ಹೆಸರಿನ ಜೊತೆಗೆ ತಮ್ಮ ಶಾಲೆಯ ಹೆಸರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಉದಾಹರಣೆಗೆ ರಾಮನಗರದ ಹೆಗ್ಗನೂರು ಸರ್ಕಾರಿ ಶಾಲೆಯನ್ನು ಟೊಯೋಟಾ ಕಂಪನಿ ಅಭಿವೃದ್ಧಿಪಡಿಸುತ್ತಿದ್ದು, ಅದಕ್ಕೆ ‘ಹೆಗ್ಗನೂರು ಸರ್ಕಾರಿ ಟೊಯೋಟಾ ಶಾಲೆ’ ಎಂದು ಹೆಸರಿಡಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ:
ಸಿಎಸ್ಆರ್ ನಿಧಿಯ ಸದ್ಬಳಕೆ
ರಾಜ್ಯದಲ್ಲಿ ವಾರ್ಷಿಕವಾಗಿ ಸುಮಾರು 8,800 ಕೋಟಿ ರೂಪಾಯಿ ಸಿಎಸ್ಆರ್ ನಿಧಿ ಲಭ್ಯವಿದ್ದು, ವಿವಿಧ ಕಂಪನಿಗಳು ಈಗಾಗಲೇ ಗ್ರಾಮೀಣ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಒಪ್ಪಿಕೊಂಡಿವೆ ಎಂದು ಸಿಎಂ ತಿಳಿಸಿದರು. ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಸುಧಾರಣೆಗಾಗಿ ಜಾಗತಿಕ ಬ್ಯಾಂಕ್ನಿಂದ 2,000 ಕೋಟಿ ರೂಪಾಯಿ ಸಾಲ ಪಡೆಯಲಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲೇ ಗುಣಮಟ್ಟದ ಶಿಕ್ಷಣ ಸಿಕ್ಕರೆ ಬೆಂಗಳೂರಿನಂತಹ ಮಹಾನಗರಗಳ ಮೇಲಿನ ಟ್ರಾಫಿಕ್ ಹಾಗೂ ಜನಸಂಖ್ಯೆಯ ಒತ್ತಡ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.



