November 5, 2026
Thursday, November 5, 2026
spot_img

ಪಂಚಕುಲ ಶಾಲೆ ಪ್ರಕರಣ: ಥಳಿಥಕ್ಕೊಳಗಾಗಿದ್ದ ಬಾಲಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌, ಅದ್ಧೂರಿ ಸ್ವಾಗತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಆರು ವರ್ಷದ ಬಾಲಕಿ ಮೇಲೆ ಎಂಟು ವರ್ಷದ ಬಾಲಕನೊಬ್ಬ ಭೀಕರವಾಗಿ ಹಲ್ಲೆ ನಡೆಸಿದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಮನೆಯ ಬಳಿ ಆಕೆಗೆ ಅದ್ಧೂರಿಯಾದ ಸ್ವಾಗತ ಸಿಕ್ಕಿದೆ.

ಟ್ವಿಟರ್‌ನಲ್ಲಿ ನಿಖಿಲ್‌ ಸೈನಿ ಎನ್ನುವವರು ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಎಲ್ಲ ಹ್ಯಾಪಿ ಎಂಡಿಂಗ್‌ಗಳು ಕಣ್ಣಲ್ಲಿ ನೀರು ತರಿಸೋದಿಲ್ಲ. ಆದರೆ ಈ ಹ್ಯಾಪಿ ಎಂಡಿಂಗ್‌ ನೀರು ತರಿಸುತ್ತದೆ. ಅಷ್ಟೆಲ್ಲಾ ಹೊಡೆತ ತಿಂದರೂ ಅದನ್ನು ಮರೆತು ಜೀವನದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾಳೆ. ಅವಳನ್ನು ಸ್ವಾಗತಿಸಲು ಇಷ್ಟೊಂದು ಜನ ಜಮಾಯಿಸಿದ್ದಾರೆ ಎಂದು ಹೇಳಲಾಗಿದೆ.

ಇಷ್ಟೊಂದೆಲ್ಲಾ ಅನುಭವಿಸಿರುವ ಮಗು ಮನೆಗೆ ಬಂದಾಗ ಆಕೆಗೆ ಪ್ರೀತಿ, ನಂಬಿಕೆ ಸಿಗಬೇಕು. ತಾನು ಸ್ಪೆಷಲ್‌ ಎನ್ನುವುದು ಅರ್ಥವಾಗಬೇಕು, ಜಗತ್ತು ಬರೀ ಕೆಟ್ಟದಲ್ಲಿ ಒಳ್ಳೆಯದು ಹೌದು ಎನ್ನುವುದು ಅರ್ಥವಾಗಬೇಕು ಎಂದು ಟ್ವೀಟ್‌ ಮಾಡಲಾಗಿದೆ.

ಪಬ್‌ಜಿ ಆಡುತ್ತಿದ್ದ ಬಾಲಕ

ಬಾಲಕಿಯ ಮೇಲೆ ದಾಳಿ ಮಾಡಿದ ಎಂಟು ವರ್ಷದ ಬಾಲಕನಿಗೆ ಪಬ್‌ಜಿ ಗೇಮ್‌ ಆಡುವ ಚಟವಿತ್ತು ಎಂದು ಪೋಷಕರು ಹೇಳಿದ್ದಾರೆ. ಆಕ್ರಮಣಾಕಾರಿ ಸ್ವಭಾವದ ಆಟಗಳನ್ನು ಆತ ಆಡುತ್ತಿದ್ದ. ಇಂತಹ ಆಟಗಳಲ್ಲಿ ಹೊಡೆದಾಟದಿಂದ ಏನೂ ಆಗುವುದೇ ಇಲ್ಲ ಎನ್ನುವಂತೆ ತೋರಿಸಲಾಗುತ್ತದೆ. ಅದನ್ನು ನೋಡಿದ್ದಾನೆ ಎಂದು ಪೋಷಕರು ಹೇಳಿದ್ದಾರೆ. ಇನ್ನು ಬಾಲಕ ಮಗುವನ್ನು ಹುಚ್ಚಿ ಎಂದು ಕೂಗುತ್ತಿದ್ದ. ಅದು ಆಕೆಗೆ ಇಷ್ಟವಾಗಲಿಲ್ಲ. ಹಾಗೆಲ್ಲ ಕರೆಯಬೇಡಿ ಎಂದು ಹೇಳಿದ್ದಳು ಎನ್ನಲಾಗಿದೆ. ಇದರಿಂದ ಆಕೆಯನ್ನು ಟಾರ್ಗೆಟ್‌ ಮಾಡಿ ಥಳಿಸಿದ್ದಾನೆ.

ಪ್ರಕರಣದ ತನಿಖೆಗಾಗಿ ಹರಿಯಾಣ ಸರ್ಕಾರ ಐವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಅಲ್ಲದೆ, ರಾಜ್ಯದ ಎಲ್ಲ ಶಾಲೆಗಳಲ್ಲಿ ಸಮಗ್ರ ಸುರಕ್ಷತಾ ಪರಿಶೀಲನೆ ನಡೆಸುವುದಾಗಿ ಘೋಷಿಸಿದೆ. ನಿರ್ಲಕ್ಷ್ಯಕ್ಕೆ ಯಾರೇ ಹೊಣೆಗಾರರು ಎಂದು ಕಂಡುಬಂದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

Must Read