ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್ಲೈನ್ ಶಾಪಿಂಗ್ ಕಂಪನಿಗಳ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ಸೈಬರ್ ಖದೀಮರ ಜಾಲಕ್ಕೆ ರಾಜಧಾನಿಯ ಗೃಹಿಣಿಯೊಬ್ಬರು ಬಲಿಯಾಗಿದ್ದಾರೆ. ಆರ್ಡರ್ ಮಾಡಿದ್ದ ಬಟ್ಟೆಯ ಹಣ ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ಅವರು ಬರೋಬ್ಬರಿ 1.05 ಲಕ್ಷ ರೂ.ಗಳನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಗೂಗಲ್ ಸರ್ಚ್ ತಂದಿಟ್ಟ ಆಪತ್ತು
ಬೆಂಗಳೂರಿನ ಹೊರಮಾವು ನಿವಾಸಿಯಾದ ಮಹಿಳೆಯೊಬ್ಬರು ಇ-ಕಾಮರ್ಸ್ ವೆಬ್ಸೈಟ್ ಒಂದರಲ್ಲಿ ಬಟ್ಟೆಗಳನ್ನು ಖರೀದಿಸಿದ್ದರು. ಆದರೆ ಸೈಜ್ ಸರಿಯಿಲ್ಲದ ಕಾರಣ ಅದನ್ನು ವಾಪಸ್ ಕಳುಹಿಸಿ, ತಾವು ಪಾವತಿಸಿದ್ದ 441 ಹಣವನ್ನು ರಿಫಂಡ್ ಮಾಡಲು ವಿನಂತಿಸಿದ್ದರು. ದಿನಗಳು ಕಳೆದರೂ ಹಣ ಬಾರದಿದ್ದಾಗ, ಅವರು ಇಂಟರ್ನೆಟ್ನಲ್ಲಿ ಆ ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕಿದ್ದಾರೆ. ಈ ವೇಳೆ ಸಿಕ್ಕ ನಕಲಿ ನಂಬರ್ಗೆ ಕರೆ ಮಾಡಿದಾಗ, ವಂಚಕರು ರಿಫಂಡ್ ಮಾಡುವ ನೆಪದಲ್ಲಿ ಅವರ ಮೊಬೈಲ್ಗೆ ಒಂದು ಲಿಂಕ್ ಕಳುಹಿಸಿದ್ದಾರೆ.
ಮೂರೇ ನಿಮಿಷದಲ್ಲಿ ಖಾತೆ ಖಾಲಿ
ಆ ಲಿಂಕ್ ಕ್ಲಿಕ್ ಮಾಡಿ ವಿವರ ನಮೂದಿಸುತ್ತಿದ್ದಂತೆ ಮಹಿಳೆಯ ಫೋನ್ ಸ್ಕ್ರೀನ್ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ಅನುಮಾನಗೊಂಡು ಅವರು ತಕ್ಷಣ ಸಿಮ್ ಕಾರ್ಡ್ ಹೊರತೆಗೆದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕೇವಲ 3 ನಿಮಿಷಗಳ ಅವಧಿಯಲ್ಲಿ ಅವರ ಎರಡು ವಿಭಿನ್ನ ಬ್ಯಾಂಕ್ ಖಾತೆಗಳಿಂದ ಒಟ್ಟು 1,05,000 ರೂ.ಗಳನ್ನು ಡಿಜಿಟಲ್ ಪೇಮೆಂಟ್ ಆಪ್ ಮೂಲಕ ಲೂಟಿ ಮಾಡಲಾಗಿದೆ.
ಮೊಸರಿನ ಪ್ಯಾಕೆಟ್ಗೆ 98,000 ವಂಚನೆ
ಇದೇ ಮಾದರಿಯ ಮತ್ತೊಂದು ವಂಚನೆ ಪ್ರಕರಣ ವಸಂತನಗರದಲ್ಲಿ ನಡೆದಿದೆ. ಬ್ಲಿಂಕಿಟ್ ಆಪ್ನಲ್ಲಿ ಹಾಳಾದ ಮೊಸರಿನ ಪ್ಯಾಕೆಟ್ ಬಂದಿದ್ದಕ್ಕೆ ರಿಫಂಡ್ ಪಡೆಯಲು ಹೋಗಿ ವ್ಯಕ್ತಿಯೊಬ್ಬರು ಗೂಗಲ್ನಲ್ಲಿ ಸಿಕ್ಕ ನಕಲಿ ಸಂಖ್ಯೆಗೆ ಕರೆ ಮಾಡಿ, ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡುವ ಮೂಲಕ 98,000 ರೂ. ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:
ಪೊಲೀಸ್ ಇಲಾಖೆಯ ಮುನ್ನೆಚ್ಚರಿಕೆ
ಇಂಟರ್ನೆಟ್ ಅಥವಾ ಗೂಗಲ್ನಲ್ಲಿ ಸಿಗುವ ಅಪರಿಚಿತ ಹೆಲ್ಪ್ಲೈನ್ ಸಂಖ್ಯೆಗಳನ್ನು ಸಾರ್ವಜನಿಕರು ಯಾವುದೇ ಕಾರಣಕ್ಕೂ ನಂಬಬಾರದು. ಅಧಿಕೃತ ಆಪ್ಗಳ ಒಳಗಿರುವ ಕಸ್ಟಮರ್ ಸಪೋರ್ಟ್ ಮಾತ್ರ ಬಳಸಬೇಕು ಮತ್ತು ಅಪರಿಚಿತರು ಕಳುಹಿಸುವ ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು ಎಂದು ಸೈಬರ್ ಪೊಲೀಸರು ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ.



