November 5, 2026
Thursday, November 5, 2026
spot_img

ಗೃಹಲಕ್ಷ್ಮಿ ಹಣಕ್ಕೆ ಕಾನೂನುಬದ್ಧ ಹಕ್ಕಿಲ್ಲ: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುವ ಮಾಸಿಕ 2,000 ನೆರವು ಕಾನೂನುಬದ್ಧ ಹಕ್ಕಲ್ಲ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಯೋಜನೆಯ ಹಣ ಬಿಡುಗಡೆ ಆಡಳಿತಾತ್ಮಕ ಅಗತ್ಯಗಳು ಹಾಗೂ ರಾಜ್ಯದ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿದ್ದು, ಹಣಕಾಸಿನ ಕೊರತೆಯ ಸಂದರ್ಭದಲ್ಲಿ ಅನುದಾನ ಬಿಡುಗಡೆಗೆ ಸರ್ಕಾರವನ್ನು ನ್ಯಾಯಾಲಯದ ಮೂಲಕ ಒತ್ತಾಯಿಸಲಾಗದು ಎಂದು ವಾದಿಸಿದೆ.

5,000 ಕೋಟಿ ಬಾಕಿ ಆರೋಪ

ಬೆಂಗಳೂರು ಮೂಲದ ಕಾರ್ಮಿಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, 1.26 ಕೋಟಿ ಮಹಿಳಾ ಫಲಾನುಭವಿಗಳಿಗೆ ಎರಡು ತಿಂಗಳ ತಲಾ 2,000 ಕಂತುಗಳು ಪಾವತಿಯಾಗಿಲ್ಲ ಎಂದು ಆರೋಪಿಸಲಾಗಿದೆ. ಒಟ್ಟು ಸುಮಾರು 5,000 ಕೋಟಿ ಬಾಕಿ ಉಳಿದಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ನವೆಂಬರ್ 5ರಂದು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಕೆ.ಎಸ್. ಭರತ್ ಕುಮಾರ್ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

ಸರ್ಕಾರದ ಆಕ್ಷೇಪವೇನು?

ಮಹಿಳೆಯರ ಸಬಲೀಕರಣಕ್ಕಾಗಿ ಕಲ್ಯಾಣ ಯೋಜನೆ ಆರಂಭಿಸಿರುವುದರಿಂದ ಫಲಾನುಭವಿಗಳಿಗೆ ಹಣ ಪಡೆಯುವ ನಿರಪೇಕ್ಷ ಕಾನೂನುಬದ್ಧ ಹಕ್ಕು ಸೃಷ್ಟಿಯಾಗುವುದಿಲ್ಲ ಎಂದು ಸರ್ಕಾರ ತನ್ನ ಆಕ್ಷೇಪಣೆಯಲ್ಲಿ ಹೇಳಿದೆ. ಯೋಜನೆಯ ಅನುಷ್ಠಾನ ಆಡಳಿತಾತ್ಮಕ ಅಗತ್ಯಗಳು ಮತ್ತು ಹಣಕಾಸಿನ ಲಭ್ಯತೆಯನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದೆ.

ಅರ್ಜಿದಾರರು ಉಲ್ಲೇಖಿಸಿರುವ ‘ನ್ಯಾಯಸಮ್ಮತ ನಿರೀಕ್ಷೆ’ ತತ್ವವೂ ಅನ್ವಯಿಸುವುದಿಲ್ಲ ಎಂದು ಸರ್ಕಾರ ವಾದಿಸಿದೆ. ಕಲ್ಯಾಣ ಯೋಜನೆ ಜಾರಿಯಲ್ಲಿರುವುದರಿಂದ ಯಾವುದೇ ಪರಿಸ್ಥಿತಿಯಲ್ಲೂ ಹಣ ಪಾವತಿಸಲೇಬೇಕು ಎಂಬ ಕಡ್ಡಾಯ ಬಾಧ್ಯತೆ ಉಂಟಾಗುವುದಿಲ್ಲ ಎಂಬುದು ಸರ್ಕಾರದ ನಿಲುವಾಗಿದೆ.

ಇದನ್ನೂ ಓದಿ:

ಫೆಬ್ರವರಿ, ಮಾರ್ಚ್ ಕಂತು ಬಿಡುಗಡೆಗೆ ಅನುದಾನ ಕೊರತೆ

2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳನ್ನು ಅನುದಾನದ ಕೊರತೆಯಿಂದ ಬಿಡುಗಡೆ ಮಾಡಲಾಗಿಲ್ಲ ಎಂದು ಸರ್ಕಾರ ಈ ಹಿಂದೆ ಒಪ್ಪಿಕೊಂಡಿತ್ತು. ಎರಡೂ ತಿಂಗಳ ಹಣಕ್ಕಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಅಗತ್ಯ ಅನುದಾನ ಬಿಡುಗಡೆಯಾಗಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಅರ್ಜಿಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶ

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕಾನೂನು ಮತ್ತು ವಾಸ್ತವಾಂಶಗಳ ಆಧಾರದಲ್ಲಿ ವಿಚಾರಣೆಗೆ ಅರ್ಹವಲ್ಲ ಎಂದು ಹೇಳಿರುವ ಸರ್ಕಾರ, ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದೆ. ವಾದ ಆಲಿಸಿದ ಹೈಕೋರ್ಟ್, ಸರ್ಕಾರದ ಆಕ್ಷೇಪಣೆಗೆ ಪ್ರತಿಕ್ರಿಯೆ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.

Must Read

Skip to toolbar