ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ಡಿಸೈನರ್ ಮನೀಶ್ ಮಾಲ್ಹೋತ್ರಾ ಮುಂಬೈನಲ್ಲಿ ಆಯೋಜಿಸಿದ್ದ ದೀಪಾವಳಿ ಪಾರ್ಟಿಗೆ ಬಾಲಿವುಡ್ನ ಸ್ಟಾರ್ ನಟ-ನಟಿಯರು ಭಾಗವಹಿಸಿದ್ದರು. ನವೆಂಬರ್ 5ರಂದು ನಡೆದ ಈ ಅದ್ಧೂರಿ ಸಮಾರಂಭಕ್ಕೆ ಅಕ್ಷಯ್ ಕುಮಾರ್, ಮಾಧುರಿ ದೀಕ್ಷಿತ್ ಸೇರಿದಂತೆ ದಿಗ್ಗಜ ಕಲಾವಿದರು ಕುಟುಂಬ ಸಮೇತರಾಗಿ ಆಗಮಿಸಿದ್ದರು. ಆದರೆ, ಈ ಇಡೀ ಪಾರ್ಟಿಯ ಹೈಲೈಟ್ ಆಗಿದ್ದು ಮಾತ್ರ ಬಾಲಿವುಡ್ನ ಕ್ಯೂಟ್ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ.
ಕೆಂಪು ರೇಷ್ಮೆ ಸೀರೆಯಲ್ಲಿ ಅಪ್ಸರೆಯಂತೆ ಕಾಣುತ್ತಿದ್ದ ಐಶ್ವರ್ಯಾ ರೈ ಮತ್ತು ಕಪ್ಪು ಬಣ್ಣದ ಶೇರ್ವಾನಿ ಧರಿಸಿ ಬಂದ ಅಭಿಷೇಕ್ ಬಚ್ಚನ್ ದಂಪತಿ, ಪಾರ್ಟಿಗೆ ಆಗಮಿಸಿದ ತಕ್ಷಣವೇ ಪ್ರತಿಯೊಬ್ಬರ ಗಮನ ಸೆಳೆದರು. ಒಬ್ಬರ ಕೈಯನ್ನು ಮತ್ತೊಬ್ಬರು ಬಿಗಿಯಾಗಿ ಹಿಡಿದುಕೊಂಡು ಬಂದ ದೃಶ್ಯವು ಉಪಸ್ಥಿತರಿದ್ದ ಎಲ್ಲರ ಮನ ಮುಟ್ಟಿತು. ಇಬ್ಬರೂ ಇತರ ಅತಿಥಿಗಳಿಗೆ ಶುಭಾಶಯ ಕೋರುವಾಗಲೂ ಪರಸ್ಪರ ಕೈಬೆರಳುಗಳನ್ನು ಬಿಡದೆ ಪ್ರೀತಿಯಿಂದ ಜೊತೆಯಾಗಿದ್ದರು.
https://www.instagram.com/reel/DfYhBomT5rH/?utm_source=ig_web_button_share_sheet
ರೆಡ್ ಕಾರ್ಪೆಟ್ ಮೇಲೆ ಪಾಪರಾಜಿಗಳು ಸೋಲೋ ಫೋಟೋ ಕೊಡುವಂತೆ ವಿನಂತಿಸಿದಾಗ, ಈ ಜೋಡಿ ಮುಗುಳುನಗುತ್ತಲೇ ನಿರಾಕರಿಸಿತು. ಬದಲಿಗೆ ಅಭಿಷೇಕ್, ಐಶ್ವರ್ಯಾರನ್ನು ತಮ್ಮತ್ತ ಹತ್ತಿರಕ್ಕೆ ಎಳೆದುಕೊಂಡು ಜೋಡಿಯಾಗಿಯೇ ಪೋಸ್ ನೀಡಿದರು. ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಾ, ನಗುತ್ತಿದ್ದ ಈ ಕ್ಷಣಗಳು, ಅಲ್ಲಿ ನೆರೆದಿದ್ದ ಪ್ರತಿಯೊಬ್ಬರಿಗೂ ಅಪರೂಪದ ದೃಶ್ಯ ವೈಭವವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡುತ್ತಿದ್ದಾರೆ. “ಇಬ್ಬರೂ ಒಟ್ಟಿಗೆ ಎಷ್ಟು ಚಂದ ಕಾಣಿಸುತ್ತಿದ್ದಾರೆ”, “ಇವರನ್ನು ನೋಡಿದರೆ ಮತ್ತೆ 2008ರ ಪ್ರೇಮ ಕಾವ್ಯ ನೆನಪಾಗುತ್ತಿದೆ”, “ಮತ್ತೆ ಒಂದಾದ ಪ್ರೇಮಿಗಳಂತೆ ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ” ಎಂದು ಕೊಂಡಾಡಿದ್ದಾರೆ. ಒಟ್ಟಿನಲ್ಲಿ, ಎಲ್ಲ ವದಂತಿಗಳಿಗೂ ಬ್ರೇಕ್ ಹಾಕಿ ಈ ಜೋಡಿ ದೀಪಾವಳಿಗೆ ಪ್ರೀತಿಯ ಬೆಳಕನ್ನು ಚೆಲ್ಲಿದೆ.



