November 6, 2026
Friday, November 6, 2026
spot_img

ಮುಂಡಗೋಡದಲ್ಲಿ ಕಾಡಾನೆಗಳ ದಾಳಿ: 8 ಎಕರೆ ಬೆಳೆ ನಾಶ, ಕಂಗಾಲಾದ ರೈತರು

ಹೊಸದಿಗಂತ ವರದಿ ಮುಂಡಗೋಡ:

ಮುಂಡಗೋಡ ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರ್ಲಿ ಸಮೀಪದ ಜಂಬೆಕೊಪ್ಪ ಗ್ರಾಮದಲ್ಲಿ ಕಾಡಾನೆಗಳ ಹಿಂಡು ರಾತ್ರಿ ವೇಳೆ ಜಮೀನುಗಳಿಗೆ ನುಗ್ಗಿ, ಬೆಳೆಗಳನ್ನು ತಿಂದು ತುಳಿದು ಭಾರೀ ಪ್ರಮಾಣದ ಹಾನಿ ಮಾಡಿರುವ ಘಟನೆ ನಡೆದಿದೆ.

ಕಾಡಾನೆಗಳ ಗುಂಪು ಕೃಷಿಕರ ಜಮೀನುಗಳಲ್ಲಿ ಹಾನಿ ಮಾಡಿದೆ. ಜಂಬೆಕೊಪ್ಪ ಗ್ರಾಮದ ರೈತರು ಹಾಗೂ ಸಹೋದರರಾದ ದೇವೇಂದ್ರ ಗಣಪ ನಾಯ್ಕ, ರವಿ ಗಣಪ ನಾಯ್ಕ, ಸುರೇಶ ಗಣಪ ನಾಯ್ಕ ಹಾಗೂ ಸಂತೋಷ ರಾಮು ನಾಯ್ಕ ಅವರಿಗೆ ಸೇರಿದ ಜಮೀನುಗಳು ಕಾಡಾನೆಗಳ ದಾಳಿಗೆ ತುತ್ತಾಗಿವೆ.

ಒಟ್ಟು ಸುಮಾರು 8 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಬೆಳೆಸಿದ್ದ ಫಸಲು ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅರಣ್ಯ ಇಲಾಖೆಗೆ ರೈತರ ಮನವಿ:

ಕಾಡಾನೆಗಳ ನಿರಂತರ ಕಾಟದಿಂದ ಗ್ರಾಮೀಣ ಭಾಗದ ರೈತರು ತೀವ್ರ ಆತಂಕಗೊಂಡಿದ್ದಾರೆ. ಈ ಕುರಿತು ಶುಕ್ರವಾರ ಕಾತೂರ ವಲಯ ಅರಣ್ಯಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿರುವ ಸಂತ್ರಸ್ತ ರೈತರು, ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸರ್ವೇ ನಡೆಸಿ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಜತೆಗೆ, ಮುಂದಿನ ದಿನಗಳಲ್ಲಿ ಕಾಡಾನೆಗಳು ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿಗೆ ನುಗ್ಗದಂತೆ ಶಾಶ್ವತ ತಡೆಗೋಡೆ ಅಥವಾ ಕಾವಲು ವ್ಯವಸ್ಥೆ ಕಲ್ಪಿಸಿ ರೈತರ ಜೀವ-ಬೆಳೆಗಳನ್ನು ರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Must Read