November 6, 2026
Friday, November 6, 2026
spot_img

ಅಘನಾಶಿನಿ ನದಿಯಲ್ಲಿ ದುರಂತ: ಚಿಪ್ಪೆಕಲ್ಲು ತೆಗೆಯಲು ಹೋಗಿದ್ದ ರಂಗಭೂಮಿ ಕಲಾವಿದ ಸಾ*ವು

ಹೊಸದಿಗಂತ ವರದಿ ಕಾರವಾರ:

ನದಿಯಲ್ಲಿ ಚಿಪ್ಪೆಕಲ್ಲು ತೆಗೆಯಲು ಇಳಿದ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿಮಾನಿ ಕರ್ಕಿಬೈಲಿನ ಅಘನಾಶಿನಿ ನದಿಯ ಹಿನ್ನೀರಿನಲ್ಲಿ ನಡೆದಿದೆ.

ಮೃತರನ್ನು ಕುಮಟಾ ತಾಲೂಕಿನ ಬರ್ಗಿ ನಿವಾಸಿ, ಖ್ಯಾತ ರಂಗಭೂಮಿ ಕಲಾವಿದ ಪಾಂಡುರಂಗ ಪಟಗಾರ (45) ಎಂದು ಗುರುತಿಸಲಾಗಿದೆ.

ಅವರೊಂದಿಗೆ ನದಿಗೆ ಇಳಿದಿದ್ದ ವಸಂತ ನಾಯ್ಕ ಎಂಬುವವರು ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನೀರಿನ ಸೆಳೆತಕ್ಕೆ ಸಿಲುಕಿದ ಇಬ್ಬರು

ಪಾಂಡುರಂಗ ಪಟಗಾರ ಅವರು ಹಲವು ವರ್ಷಗಳಿಂದ ನದಿಯಲ್ಲಿ ಚಿಪ್ಪೆಕಲ್ಲು ತೆಗೆಯುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ಶುಕ್ರವಾರ ಬೆಳಗ್ಗೆ ವಸಂತ ನಾಯ್ಕ ಅವರೊಂದಿಗೆ ಕಿಮಾನಿ ಕರ್ಕಿಬೈಲಿನ ಅಘನಾಶಿನಿ ನದಿಯ ಹಿನ್ನೀರಿನಲ್ಲಿ ಚಿಪ್ಪೆಕಲ್ಲು ತೆಗೆಯಲು ಇಳಿದಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿದ ಇಬ್ಬರೂ ಮುಳುಗಿದ್ದಾರೆ. ಘಟನೆಯಲ್ಲಿ ಪಾಂಡುರಂಗ ಅವರು ಮೃತಪಟ್ಟಿದ್ದು, ವಸಂತ ನಾಯ್ಕ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ:

ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದ ಕಲಾವಿದ

ಪಾಂಡುರಂಗ ಪಟಗಾರ ಅವರು ಕೇವಲ ಕಾರ್ಮಿಕರಾಗಿರದೆ, ಉತ್ತಮ ರಂಗಭೂಮಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಕುಮಟಾ, ಗೋಕರ್ಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ತಮ್ಮ ಕಲಾ ಸೇವೆಗಾಗಿ ಹಲವು ಪ್ರಶಸ್ತಿ ಹಾಗೂ ಸಮ್ಮಾನಗಳಿಗೂ ಭಾಜನರಾಗಿದ್ದರು.

ಅಭಿನಯದ ಜೊತೆಗೆ ನಾಟಕ ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದ ಅವರು, ಕರ್ನಾಟಕ ರಾಜ್ಯ ನಾಟಕ ಬರಹಗಾರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಸದಸ್ಯರಾಗಿದ್ದರು. ಅವರ ನಿಧನದಿಂದ ಸ್ಥಳೀಯ ರಂಗಭೂಮಿ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

Must Read