November 7, 2026
Saturday, November 7, 2026
spot_img

ಚಿತ್ರಮಂದಿರಗಳಲ್ಲಿ ‘ರಾಮಾಯಣ’ ಅಬ್ಬರ: ಬಿಡುಗಡೆಯಾದ ಎರಡು ದಿನದಲ್ಲೇ ಭರ್ಜರಿ ಗಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ‘ರಾಮಾಯಣ’ ಸಿನಿಮಾ ಈಗ ದೇಶ-ವಿದೇಶಗಳ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಈ ಸಿನಿಮಾ ವಿಶ್ವಾದ್ಯಂತ 221.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

ದೇಶಾದ್ಯಂತ ಒಟ್ಟು 23,316 ಪ್ರದರ್ಶನಗಳನ್ನು ಕಂಡಿರುವ ಈ ಸಿನಿಮಾ, ಎರಡನೇ ದಿನ ಭಾರತದಲ್ಲಿ 48.05 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರೊಂದಿಗೆ ಭಾರತದಲ್ಲಷ್ಟೇ ಇದುವರೆಗೆ ಒಟ್ಟು 134.80 ಕೋಟಿ ರೂಪಾಯಿ ಹಾಗೂ 112.90 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಮೊದಲ ದಿನ 64.85 ಕೋಟಿ ರೂ. ಗಳಿಸಿದ್ದ ಸಿನಿಮಾ, ಶುಕ್ರವಾರ ಕೆಲಸದ ದಿನವಾಗಿದ್ದರಿಂದ ಗಳಿಕೆಯಲ್ಲಿ ಶೇ. 25.9 ರಷ್ಟು ಸಣ್ಣ ಕುಸಿತ ಕಂಡಿದೆಯಾದರೂ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ.

ಚಿತ್ರದ ಭಾಷಾವಾರು ಗಳಿಕೆಯನ್ನು ಗಮನಿಸಿದರೆ, ಹಿಂದಿ ಆವೃತ್ತಿಯು 19,859 ಪ್ರದರ್ಶನಗಳಿಂದ ಗರಿಷ್ಠ 35.50 ಕೋಟಿ ರೂಪಾಯಿ ಗಳಿಸಿ ಅಗ್ರಸ್ಥಾನದಲ್ಲಿದೆ. ಕನ್ನಡ ಆವೃತ್ತಿಯು 904 ಪ್ರದರ್ಶನಗಳಿಂದ 5.15 ಕೋಟಿ ರೂಪಾಯಿ ಬಾಚಿಕೊಂಡು ಅದ್ಭುತ ಪ್ರದರ್ಶನ ನೀಡಿದೆ. ತೆಲುಗು ಆವೃತ್ತಿ 1,530 ಶೋಗಳಿಂದ 4.75 ಕೋಟಿ, ತಮಿಳು ಆವೃತ್ತಿ 577 ಶೋಗಳಿಂದ 1.50 ಕೋಟಿ ಹಾಗೂ ಮಲಯಾಳಂ ಆವೃತ್ತಿ 446 ಪ್ರದರ್ಶನಗಳಿಂದ ಶೇ. 65.0 ರಷ್ಟು ಆಕ್ಯುಪೆನ್ಸಿಯೊಂದಿಗೆ 1.15 ಕೋಟಿ ರೂಪಾಯಿ ಗಳ ತಂದುಕೊಟ್ಟಿದೆ.

ಸಾಗರೋತ್ತರ ಮಾರುಕಟ್ಟೆಯಲ್ಲೂ ಸಿನಿಮಾಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಎರಡನೇ ದಿನ ವಿದೇಶಗಳಲ್ಲಿ 35.00 ಕೋಟಿ ರೂಪಾಯಿ ಗಳಿಕೆಯಾಗಿದ್ದು, ಇದರೊಂದಿಗೆ ವಿದೇಶಿ ಮಾರುಕಟ್ಟೆಯ ಒಟ್ಟು ಗ್ರಾಸ್ ಕಲೆಕ್ಷನ್ 86.25 ಕೋಟಿ ರೂಪಾಯಿಗೆ ತಲುಪಿದೆ.

ಇಂದಿನಿಂದ ಶನಿವಾರ ಮತ್ತು ಭಾನುವಾರದ ವಾರಾಂತ್ಯದ ರಜಾದಿನಗಳು ಆರಂಭವಾಗುತ್ತಿರುವುದರಿಂದ ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಲಿದ್ದಾರೆ. ಜೊತೆಗೆ ಮುಂಬರುವ ಸೋಮವಾರ ಮತ್ತು ಮಂಗಳವಾರ ಹಬ್ಬದ ಸಾಲು ಸಾಲು ರಜೆಗಳಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಸಿನಿಮಾದ ಕಲೆಕ್ಷನ್ ಸುನಾಮಿ ಇನ್ನಷ್ಟು ಜೋರಾಗಲಿದೆ ಎಂದು ಚಲನಚಿತ್ರ ವಿಶ್ಲೇಷಕರು ಅಂದಾಜಿಸಿದ್ದಾರೆ.

Must Read

Skip to toolbar