November 7, 2026
Saturday, November 7, 2026
spot_img

‘ರಾಮಾಯಣ’ ಚಿತ್ರದ ದೃಶ್ಯ ವೈಭವಕ್ಕೆ ದಿಗ್ಗಜ ನಿರ್ದೇಶಕ ಫಿದಾ: ‘ರಾವಣ’ ಯಶ್ ಅಭಿನಯಕ್ಕೆ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತೀಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಕನ್ನಡಿಗರ ಹೆಮ್ಮೆಯ ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5 ರಂದು ವಿಶ್ವದಾದ್ಯಂತ ತೆರೆಕಂಡಿದೆ. ಮಿಶ್ರಪ್ರತಿಕ್ರಿಯೆಗಳ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ಈ ಚಿತ್ರವನ್ನು ದಕ್ಷಿಣ ಭಾರತದ ಪ್ರಸಿದ್ಧ ನಿರ್ದೇಶಕ ಶಂಕರ್ ವೀಕ್ಷಿಸಿದ್ದು, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಮ್ಮ ಅದ್ಭುತ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ.

ಚಿತ್ರದ ಮೇಕಿಂಗ್ ಮತ್ತು ತಾಂತ್ರಿಕ ಗುಣಮಟ್ಟವನ್ನು ಮನಸಾರೆ ಹೊಗಳಿರುವ ಶಂಕರ್, “ರಾಮಾಯಣ ಒಂದು ಅದ್ಭುತ ದೃಶ್ಯ ವೈಭವ. ಭಾರತೀಯ ಚಿತ್ರರಂಗದಲ್ಲಿ ನಾನು ಎಂದಿಗೂ ಇಂತಹ ವಿಶುವಲ್ಸ್ ನೋಡಿರಲಿಲ್ಲ. ನಮ್ಮ ಭಾರತೀಯ ಸಿನಿಮಾವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ನಿರ್ದೇಶಕ ನಿತೀಶ್ ತಿವಾರಿಗೆ ನನ್ನ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಎ.ಆರ್. ರೆಹಮಾನ್ ಮತ್ತು ಹಾನ್ಸ್ ಝಿಮ್ಮರ್ ಅವರ ಹಿನ್ನೆಲೆ ಸಂಗೀತ ಹಾಗೂ ಗ್ರಾಫಿಕ್ಸ್ ಕೆಲಸಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ವಿಮರ್ಶೆಯಲ್ಲಿ ಎಲ್ಲರ ಗಮನ ಸೆಳೆದದ್ದು ಯಶ್ ಅವರ ಪಾತ್ರದ ಬಗ್ಗೆ ಶಂಕರ್ ಆಡಿದ ಮಾತುಗಳು. ರಾವಣನಾಗಿ ನಟಿಸಿರುವ ಯಶ್ ಅಭಿನಯವನ್ನು ಕೊಂಡಾಡಿದ ಶಂಕರ್, “ಪ್ರತಿ ಫ್ರೇಮ್‌ನಲ್ಲೂ ಯಶ್ ಅವರನ್ನು ಪರದೆಯ ಮೇಲೆ ನೋಡುವುದೇ ಒಂದು ಸಂಭ್ರಮ. ಅವರು ಈ ಚಿತ್ರದಲ್ಲಿ ಅತ್ಯಂತ ಪ್ರೀತಿಪಾತ್ರ ವಿಲನ್ ಆಗಿ ಕಾಣಿಸಿಕೊಂಡಿದ್ದು, ಅದ್ಭುತ ಅಭಿನಯ ನೀಡಿದ್ದಾರೆ” ಎಂದು ಮನಸಾರೆ ಶ್ಲಾಘಿಸಿದ್ದಾರೆ.

ಚಿತ್ರದ ನಾಯಕ ರಣಬೀರ್ ಕಪೂರ್ ಮತ್ತು ನಾಯಕಿ ಸಾಯಿ ಪಲ್ಲವಿ ಅವರಿಗೂ ಶುಭ ಹಾರೈಸಿದ ಶಂಕರ್, ಇಡೀ ತಂಡಕ್ಕೆ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ. ಶಂಕರ್ ಅವರ ಈ ಪ್ರಶಂಸಾತ್ಮಕ ಪೋಸ್ಟ್‌ಗೆ ತಕ್ಷಣವೇ ಸ್ಪಂದಿಸಿದ ನಿರ್ದೇಶಕ ನಿತೀಶ್ ತಿವಾರಿ, ಕೈಮುಗಿಯುವ ಎಮೋಜಿಗಳೊಂದಿಗೆ “ತುಂಬಾ ಧನ್ಯವಾದಗಳು ಸರ್” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

Must Read

Skip to toolbar