ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿರುವ ಸ್ಯಾಂಡಲ್ವುಡ್ ನಟ ದರ್ಶನ್ ಅವರಿಗೆ ನ್ಯಾಯಾಲಯದಿಂದ ಮಹತ್ವದ ಆದೇಶವೊಂದು ಹೊರಬಿದ್ದಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ಗೆ ಜೈಲಿನ ಆವರಣದಲ್ಲಿಯೇ ಫಿಸಿಯೋಥೆರಪಿ ಚಿಕಿತ್ಸೆ ಪಡೆದುಕೊಳ್ಳಲು 59ನೇ ಸಿಸಿಹೆಚ್ ನ್ಯಾಯಾಲಯವು ಕೆಲವೊಂದು ಕಠಿಣ ಷರತ್ತುಗಳೊಂದಿಗೆ ಅನುಮತಿ ನೀಡಿದೆ.
ಕಳೆದ ಮೂರು ದಿನಗಳಿಂದ ಈ ಅರ್ಜಿಯ ಕುರಿತು ತೀವ್ರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಇಂದು ತನ್ನ ತೀರ್ಪನ್ನು ಪ್ರಕಟಿಸಿದೆ. ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು, “ದರ್ಶನ್ ಅವರು ಕಳೆದ 15 ತಿಂಗಳುಗಳಿಂದ ಜೈಲಿನಲ್ಲಿದ್ದು, ನೆಲದ ಮೇಲೆ ಹಾಸಿಗೆಯಲ್ಲಿ ಮಲಗುತ್ತಿರುವುದರಿಂದ ಹಾಗೂ ಚಳಿಗಾಲದ ಕಾರಣದಿಂದಾಗಿ ಅವರ ಬೆನ್ನು ನೋವು ತೀವ್ರಗೊಂಡಿದೆ. ಅವರ ಎಲ್4 ಮತ್ತು ಎಲ್5 ಭಾಗದಲ್ಲಿ ಸಮಸ್ಯೆ ಇರುವುದರಿಂದ ಸೂಕ್ತ ಚಿಕಿತ್ಸೆಯ ಅಗತ್ಯವಿದೆ” ಎಂದು ವಾದ ಮಂಡಿಸಿದ್ದರು.
ಇದನ್ನೂ ಓದಿ:
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು (SPP), “ಕಳೆದ ಬಾರಿ ದರ್ಶನ್ ಅವರು ಇದೇ ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದರು. ಆದರೆ ಚಿಕಿತ್ಸೆ ಪಡೆಯುವ ಬದಲಾಗಿ ಸಿನಿಮಾ ಕಾರ್ಯಕ್ರಮಗಳು ಹಾಗೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು” ಎಂದು ಕೋರ್ಟ್ ಗಮನಕ್ಕೆ ತಂದಿದ್ದರು. ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ದರ್ಶನ್ ಹೊರಗಿನ ಆಸ್ಪತ್ರೆಗೆ ದಾಖಲಾಗಲು ಅವಕಾಶ ನೀಡದೆ, ಜೈಲಿನ ಆವರಣದ ಒಳಗಡೆಯೇ ಫಿಸಿಯೋಥೆರಪಿ ಮತ್ತು ಬೆನ್ನು ನೋವಿಗೆ ಸಂಬಂಧಿಸಿದ ಇತರ ಅಗತ್ಯ ಚಿಕಿತ್ಸೆಗಳನ್ನು ಪಡೆಯಲು ಸೂಚಿಸಿದ್ದಾರೆ. ಚಿಕಿತ್ಸೆಗೆ ಜೈಲಿನಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜೈಲಧಿಕಾರಿಗಳಿಗೆ ನ್ಯಾಯಾಲಯ ಆದೇಶ ನೀಡಿದೆ.



