November 8, 2026
Sunday, November 8, 2026
spot_img

ಅಡ್ವಾಣಿ ಬದುಕಿನ 99 ವಸಂತ: ರಾಜಕೀಯ ಪಯಣದ ಮೆಲುಕು; ಹಿರಿಯ ನಾಯಕನಿಗೆ ಪ್ರಧಾನಿ ಮೋದಿ ವಿಶೇಷ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ರಾಜಕೀಯದಲ್ಲಿ ಹಲವು ದಶಕಗಳ ಕಾಲ ತಮ್ಮದೇ ಛಾಪು ಮೂಡಿಸಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಭಾನುವಾರ (ನವೆಂಬರ್ 8) 99ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ರಾಜಕೀಯ ಬದುಕು, ಹೋರಾಟ ಮತ್ತು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ವಿಶೇಷ ಲೇಖನದ ಮೂಲಕ ಗೌರವ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಲೇಖನವನ್ನು ಹಂಚಿಕೊಂಡಿರುವ ಮೋದಿ, ಅಡ್ವಾಣಿ ಅವರ ಜೀವನಯಾನವನ್ನು ಭಾರತದ ರಾಜಕೀಯ ಇತಿಹಾಸದ ಪ್ರಮುಖ ಅಧ್ಯಾಯವೆಂದು ಬಣ್ಣಿಸಿದ್ದಾರೆ. ದೇಶ ವಿಭಜನೆಯ ನೋವಿನಿಂದ ಹಿಡಿದು ತುರ್ತು ಪರಿಸ್ಥಿತಿ, ರಾಮ ರಥಯಾತ್ರೆ ಹಾಗೂ ಬಿಜೆಪಿ ಸಂಘಟನೆಯ ಬೆಳವಣಿಗೆಯವರೆಗಿನ ಅವರ ಪಯಣವನ್ನು ನೆನಪಿಸಿಕೊಂಡಿದ್ದಾರೆ.

ವಿಭಜನೆಯ ನೋವಿನಿಂದ ಆರಂಭವಾದ ಬದುಕಿನ ಪಯಣ

1927ರ ನವೆಂಬರ್ 8ರಂದು ಇಂದಿನ ಪಾಕಿಸ್ತಾನದ ಕರಾಚಿಯಲ್ಲಿ ಕಿಶನ್‌ಚಂದ್ ಮತ್ತು ಜ್ಞಾನಿ ದೇವಿ ದಂಪತಿಯ ಪುತ್ರನಾಗಿ ಅಡ್ವಾಣಿ ಜನಿಸಿದರು. ಕರಾಚಿಯ ಸೇಂಟ್ ಪ್ಯಾಟ್ರಿಕ್ ಶಾಲೆಯಲ್ಲಿ ಶಿಕ್ಷಣ ಪಡೆದ ಅವರು, ತಮ್ಮ 14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಯಾದರು.

1947ರ ದೇಶ ವಿಭಜನೆಯ ಸಂದರ್ಭದಲ್ಲಿ ಸಿಂಧ್‌ನಲ್ಲಿದ್ದ ತಮ್ಮ ಮನೆ, ಪರಿಸರ ಹಾಗೂ ಪರಿಚಿತ ಬದುಕನ್ನು ತೊರೆದು ಭಾರತಕ್ಕೆ ಬರಬೇಕಾಯಿತು. ರಾಜಸ್ಥಾನದಲ್ಲಿ ಸಂಘಟನಾ ಕಾರ್ಯ ಆರಂಭಿಸಿದ ಅವರು, ನಂತರ ದೆಹಲಿಗೆ ತೆರಳಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಜನಸಂಘದಿಂದ ಬಿಜೆಪಿಯ ನಿರ್ಮಾಣದವರೆಗೆ

ಅಡ್ವಾಣಿ ಅವರು ಭಾರತೀಯ ಜನಸಂಘವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1967ರಲ್ಲಿ ದೆಹಲಿ ಮೆಟ್ರೋಪಾಲಿಟನ್ ಕೌನ್ಸಿಲ್‌ನ ಅಧ್ಯಕ್ಷರಾದರು. 1970ರಲ್ಲಿ ರಾಜ್ಯಸಭೆ ಪ್ರವೇಶಿಸುವ ಮೂಲಕ ಸಂಸದೀಯ ರಾಜಕೀಯಕ್ಕೆ ಕಾಲಿಟ್ಟರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದ ಅವರು, 1980ರಲ್ಲಿ ಬಿಜೆಪಿ ಸ್ಥಾಪನೆಯಾದ ಬಳಿಕ ಪಕ್ಷದ ಸಂಘಟನಾ ಬೆಳವಣಿಗೆಗೆ ಶ್ರಮಿಸಿದರು. 1986ರಿಂದ 1990ರವರೆಗೆ, 1993ರಿಂದ 1998ರವರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2004-05ರಲ್ಲಿಯೂ ಅಧ್ಯಕ್ಷ ಸ್ಥಾನದಲ್ಲಿದ್ದರು.

ಅವರ ನಾಯಕತ್ವದಲ್ಲಿ ಬಿಜೆಪಿ ರಾಷ್ಟ್ರಮಟ್ಟದಲ್ಲಿ ತನ್ನ ಸಂಘಟನೆಯನ್ನು ವಿಸ್ತರಿಸಿಕೊಂಡಿತು. 1996ರಲ್ಲಿ ಲೋಕಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಹಂತಕ್ಕೆ ತಲುಪಿತು.

ತುರ್ತು ಪರಿಸ್ಥಿತಿ ಮತ್ತು ರಾಮ ರಥಯಾತ್ರೆ

1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಅಡ್ವಾಣಿ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಈ ಅವಧಿಯ ಅನುಭವಗಳನ್ನು ಅವರು ತಮ್ಮ A Prisoner’s Scrap-Book ಕೃತಿಯಲ್ಲಿ ದಾಖಲಿಸಿದ್ದಾರೆ.

1990ರಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗೆ ಕೈಗೊಂಡ ರಾಮ ರಥಯಾತ್ರೆ ಅವರ ರಾಜಕೀಯ ಜೀವನದ ಪ್ರಮುಖ ಘಟ್ಟವಾಯಿತು. ಈ ಯಾತ್ರೆಯಲ್ಲಿ ನರೇಂದ್ರ ಮೋದಿ ಕೂಡ ಆರಂಭಿಕ ಹಂತದಿಂದಲೇ ಭಾಗಿಯಾಗಿದ್ದಾಗಿ ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದಾರೆ.

ಗೃಹ ಸಚಿವರಿಂದ ಉಪಪ್ರಧಾನಿವರೆಗೆ

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ 1999ರಿಂದ 2004ರವರೆಗೆ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು. 2002ರಿಂದ 2004ರವರೆಗೆ ದೇಶದ ಉಪಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದರು. ಆಂತರಿಕ ಭದ್ರತೆ ಬಲಪಡಿಸುವುದು, ಭಯೋತ್ಪಾದನೆ ವಿರುದ್ಧದ ಕ್ರಮಗಳು ಹಾಗೂ ಭದ್ರತಾ ಸಿಬ್ಬಂದಿಯ ಕಲ್ಯಾಣಕ್ಕೆ ನೀಡಿದ ಕೊಡುಗೆಯನ್ನು ಮೋದಿ ಸ್ಮರಿಸಿದ್ದಾರೆ.

ಓದು, ಸಿನಿಮಾ ಮತ್ತು ಸಂಸ್ಕೃತಿಯ ಆಸಕ್ತಿ

ಅಡ್ವಾಣಿ ಅವರು ರಾಜಕೀಯದ ಜೊತೆಗೆ ಪುಸ್ತಕ ಓದುವಿಕೆ, ಸಿನಿಮಾ ಮತ್ತು ರಂಗಭೂಮಿಯಲ್ಲೂ ಆಸಕ್ತಿ ಹೊಂದಿದ್ದರು. My Country My Life ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಸಿಂಧಿ ಸಂಸ್ಕೃತಿಯೊಂದಿಗಿನ ನಂಟನ್ನು ಉಳಿಸಿಕೊಂಡಿದ್ದ ಅವರು, ಲೇಹ್ ಸಮೀಪ ಸಿಂಧು ದರುಶನ ಪೂಜೆಯ ಜನಪ್ರಿಯತೆಗೂ ಶ್ರಮಿಸಿದ್ದರು ಎಂದು ಮೋದಿ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

ಅವರ ಪತ್ನಿ ಕಮಲಾ ಅಡ್ವಾಣಿ ಅವರು ಸಾರ್ವಜನಿಕ ಜೀವನದ ಉದ್ದಕ್ಕೂ ನೀಡಿದ ಬೆಂಬಲವನ್ನೂ ಪ್ರಧಾನಿ ಸ್ಮರಿಸಿದ್ದಾರೆ.

ಭಾರತ ರತ್ನ ಗೌರವ, ಬಿಜೆಪಿಯಿಂದ ವಿಶೇಷ ಕಾರ್ಯಕ್ರಮ

ಅಡ್ವಾಣಿ ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ 2015ರಲ್ಲಿ ಪದ್ಮವಿಭೂಷಣ ಹಾಗೂ 2024ರಲ್ಲಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2024ರ ಮಾರ್ಚ್ 31ರಂದು ಅವರ ನಿವಾಸದಲ್ಲಿ ಭಾರತ ರತ್ನ ಪ್ರದಾನ ಮಾಡಿದ್ದರು.

ಇಂದು ವಿಶೇಷ ಕಾರ್ಯಕ್ರಮ

ಇನ್ನು ಅವರ ಜನ್ಮದಿನದ ಅಂಗವಾಗಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್, ಪುತ್ರಿ ಪ್ರತಿಭಾ ಅಡ್ವಾಣಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Must Read

Skip to toolbar