November 8, 2026
Sunday, November 8, 2026
spot_img

ನಕ್ಸಲ್ ನಾಡಿನಲ್ಲಿ ಮೋದಿ ದೀಪಾವಳಿ ಸಂಭ್ರಮ: ಗಡಿಕಾಯುವ ಯೋಧರೊಂದಿಗೆ ಹಬ್ಬ ಆಚರಿಸಲಿರುವ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಒಂದು ಕಾಲದಲ್ಲಿ ನಕ್ಸಲರ ಪ್ರಭಾವಕ್ಕೆ ಒಳಗಾಗಿದ್ದ ಛತ್ತೀಸ್‌ಗಢದ ಬಸ್ತರ್ ಪ್ರದೇಶ ಈ ಬಾರಿ ವಿಶೇಷ ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಸ್ತರ್‌ಗೆ ಭೇಟಿ ನೀಡಿ, ದೇಶದ ಭದ್ರತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಭದ್ರತಾ ಪಡೆಗಳ ಸಿಬ್ಬಂದಿಯೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ, ಧೈರ್ಯಶಾಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಲು ಬಸ್ತರ್‌ಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ನಕ್ಸಲರ ಪ್ರಾಬಲ್ಯಕ್ಕೆ ಹೆಸರಾಗಿದ್ದ ಬಸ್ತರ್ ಪ್ರದೇಶದಲ್ಲಿ ಇದೀಗ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡು ದೇಶದ ಭದ್ರತೆಗಾಗಿ ಅಪಾರ ತ್ಯಾಗ ಮಾಡಿರುವ ಯೋಧರ ಸೇವೆಯನ್ನು ಸ್ಮರಿಸುವುದಾಗಿ ತಿಳಿಸಿದ್ದಾರೆ.

ಬಸ್ತರ್‌ನಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ಹಾಗೂ ಛತ್ತೀಸ್‌ಗಢ ಪೊಲೀಸ್ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಭದ್ರತಾ ಕಾರ್ಯಾಚರಣೆಗಳು ತೀವ್ರಗೊಂಡಿದ್ದು, ನಕ್ಸಲ್ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ.

ಈ ವರ್ಷದ ಮಾರ್ಚ್ 31ರಂದು ಕೇಂದ್ರ ಸರ್ಕಾರ ದೇಶವನ್ನು ನಕ್ಸಲಿಸಂನಿಂದ ಮುಕ್ತಗೊಳಿಸಲಾಗಿದೆ ಎಂದು ಘೋಷಿಸಿತ್ತು.

ದೀಪಾವಳಿ ಶುಭಾಶಯ

ಇದಕ್ಕೂ ಮುನ್ನ ಶನಿವಾರ ವಿಡಿಯೋ ಸಂದೇಶದ ಮೂಲಕ ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ್ದ ಮೋದಿ, ಎಲ್ಲರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷ ನೆಲೆಸಲಿ ಎಂದು ಹಾರೈಸಿದ್ದರು. ಪ್ರತಿವರ್ಷದಂತೆ ಈ ಬಾರಿಯೂ ಭದ್ರತಾ ಸಿಬ್ಬಂದಿಯೊಂದಿಗೆ ಹಬ್ಬ ಆಚರಿಸುವ ಸಂಪ್ರದಾಯ ಮುಂದುವರಿಸುವುದಾಗಿ ತಿಳಿಸಿದ್ದರು.

Must Read

Skip to toolbar