ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಸೂಪರ್ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್ನ ಬಹುನಿರೀಕ್ಷಿತ ‘ವಾರಣಾಸಿ’ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಆಕ್ಷನ್ ಅಡ್ವೆಂಚರ್ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಮತ್ತು ವಿಶ್ವದರ್ಜೆಯ ವಿಎಫ್ಎಕ್ಸ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮುಗಿಲು ಮುಟ್ಟಿದೆ.
ಸಿನಿಮಾದ ಮಾರುಕಟ್ಟೆ ಪ್ರಕ್ರಿಯೆಗಳು ಆರಂಭವಾಗುತ್ತಿದ್ದಂತೆಯೇ, ವಿಶ್ವ ಸಿನಿಮಾರಂಗದ ದೈತ್ಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ‘ಸೋನಿ’ ‘ವಾರಣಾಸಿ’ ಚಿತ್ರದ ವಿದೇಶಿ ಬಿಡುಗಡೆ ಹಕ್ಕುಗಳನ್ನು ಖರೀದಿಸಲು ಮುಂದೆ ಬಂದಿದೆ. ಇತ್ತೀಚೆಗಷ್ಟೇ ಭಾರತದ ‘ರಾಮಾಯಣ’ ಸಿನಿಮಾವನ್ನು ವಿಶ್ವದಾದ್ಯಂತ ಸುಮಾರು 50 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಿ ಯಶಸ್ಸು ಕಂಡಿದ್ದ ಸೋನಿ, ಈಗ ವಾರಣಾಸಿ ನಿರ್ಮಾಪಕರ ಜೊತೆ ಹಕ್ಕುಗಳಿಗಾಗಿ ನೇರ ಮಾತುಕತೆ ನಡೆಸುತ್ತಿದೆ.
ಒಂದೊಮ್ಮೆ ಸೋನಿ ಸಂಸ್ಥೆಯು ಈ ಸಿನಿಮಾದ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಅದ್ದೂರಿಯಾಗಿ ‘ವಾರಣಾಸಿ’ ಬಿಡುಗಡೆಯಾಗಲಿದೆ. ಹಲವು ಭಾಷೆಗಳಿಗೆ ಡಬ್ ಆಗುತ್ತಿರುವ ಈ ಚಿತ್ರವು ವಿಶ್ವದ ಮೂಲೆ ಮೂಲೆಗೂ ಪ್ರೇಕ್ಷಕರನ್ನು ತಲುಪಲಿದೆ.
ಭಾರತ, ಆಫ್ರಿಕಾ, ಯುರೋಪ್ ಹಾಗೂ ಅಂಟಾರ್ಟಿಕಾದಂತಹ ಅಪರೂಪದ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ, ರಾಜಮೌಳಿ ಅವರ ವೃತ್ತಿಜೀವನದ ಅತಿದೊಡ್ಡ ಆಕ್ಷನ್ ಸಿನಿಮಾ ಎನಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿರುವ ‘ವಾರಣಾಸಿ’ ಬರುವ ಏಪ್ರಿಲ್ ತಿಂಗಳಲ್ಲಿ ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ.



