ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಹೈಕೋರ್ಟ್ ಸರ್ಕಾರದ ಉಚಿತ ಯೋಜನೆಗಳು ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಯೋಜನೆಗಳನ್ನು ಉಚಿತವಾಗಿ ನೀಡಿ ಇತ್ತ ದಿನಬಳಕೆ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದರೆ ಜನ ಜೀವನ ಮಾಡೋದು ಹೇಗೆ ಎಂದು ಪ್ರಶ್ನಿಸಿದೆ.
ಇದು ಕಳವಳಕಾರಿಯಾಗಿದೆ. ಸರ್ಕಾರ ಉಚಿತ ಯೋಜನೆಗಳನ್ನು ಕೊಡುತ್ತಿದೆ ಎಂದಾದರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡುವುದು ಖಚಿತವಾಗಿದೆ. ಆದರೆ ಹೀಗೆ ಬೆಲೆ ಹೆಚ್ಚು ಮಾಡುತ್ತಾ ಹೋದರೆ ಮನುಷ್ಯ ಹೇಗೆ ಬದುಕೋದು? ಎಲ್ಲಿಗೆ ಹೋಗಬೇಕು? ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದೆ.
ಅನ್ನಭಾಗ್ಯ ಯೋಜನೆಯಡಿ ಮೈಸೂರಿನ ಸರ್ಕಾರಿ ಉಗ್ರಾಣವೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಆಹಾರ ಧಾನ್ಯಗಳಲ್ಲಿ ಸುಮಾರು 320 ಕ್ವಿಂಟಲ್ ಅಕ್ಕಿ ಮತ್ತು 85 ಕ್ವಿಂಟಲ್ ಗೋಧಿ ಕೊರತೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಉಗ್ರಾಣದ ಹಿರಿಯ ವ್ಯವಸ್ಥಾಪಕರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸುವಾಗ ನ್ಯಾಯಪೀಠವು ಸರ್ಕಾರದ ನೀತಿಗಳ ವಿರುದ್ಧ ಮೌಖಿಕವಾಗಿ ಆಕ್ರೋಶ ಹೊರಹಾಕಿತು.
ಜನಸಾಮಾನ್ಯರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಉದಾಹರಣೆ ಸಹಿತ ವಿವರಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ಕಳೆದ ತಿಂಗಳು ತುಪ್ಪ ತರಲು ಹೋದಾಗ ಪ್ರತಿ ಕೆ.ಜಿ.ಗೆ 650 ರೂಪಾಯಿ ಇತ್ತು. ಆದರೆ ಈಗ ಅದು ಬರೋಬ್ಬರಿ 850 ರೂಪಾಯಿ ಆಗಿದೆ. ಇಷ್ಟೊಂದು ದರ ಹೆಚ್ಚಾದರೆ ದೀಪಾವಳಿಗೆ ತುಪ್ಪದ ದೀಪ ಹಚ್ಚುವುದು ಹೇಗೆ? ಯಮದೀಪ ಹಚ್ಚುವ ಬದಲು ನನ್ನನ್ನೇ ಕರೆದುಕೊಂಡು ಹೋಗು ಎಂದು ಯಮನನ್ನೇ ಕೇಳಬೇಕಷ್ಟೇ! ಎಂದಿದ್ದಾರೆ.



