ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ‘ದಿಮಾಗಿ ನಕ್ಸಲ್’ ಹೇಳಿಕೆ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಅವರಿಗೆ ಬಹಿರಂಗ ಚರ್ಚೆಯ ಸವಾಲನ್ನು ಮತ್ತೊಮ್ಮೆ ಹಾಕಿದ್ದಾರೆ. ದೇಶವಿರೋಧಿ ಯಾರು, ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿರುವವರು ಯಾರು ಎಂಬುದರ ಬಗ್ಗೆ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಚರ್ಚೆಗೆ ಸಿದ್ಧ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಕೂಡ ತಿರುಗೇಟು ನೀಡಿದೆ.
ಸಿಆರ್ಪಿಎಫ್ ಯೋಧರನ್ನು ಉದ್ದೇಶಿಸಿ ರಾಹುಲ್ ಪೋಸ್ಟ್
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಿಆರ್ಪಿಎಫ್ ಸಿಬ್ಬಂದಿಯನ್ನು ಉದ್ದೇಶಿಸಿ ಬರೆದಿರುವ ರಾಹುಲ್ ಗಾಂಧಿ, ಪ್ರಧಾನಿ ಅವರ ಮಾತುಗಳನ್ನು ಯೋಧರು ನಂಬಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಮ್ಮನ್ನು ನಕ್ಸಲರು ಎಂದು ಕರೆದಿದ್ದಾರೆ ಎಂದು ಆರೋಪಿಸಿರುವ ಅವರು, ಬಹಿರಂಗ ಚರ್ಚೆಗೆ ನೀಡಿರುವ ಸವಾಲು ಇನ್ನೂ ಹಾಗೆಯೇ ಇದೆ ಎಂದು ತಿಳಿಸಿದ್ದಾರೆ. ಚರ್ಚೆಯ ಬಳಿಕ ಪ್ರಧಾನಿ ಒಬ್ಬ ಯೋಧನ ಎದುರೂ ನಿಲ್ಲುವ ಧೈರ್ಯ ಮಾಡಲಾರರು ಎಂದು ಟೀಕಿಸಿದ್ದಾರೆ.
ಬಸ್ತರ್ನಲ್ಲಿ ಮೋದಿ ಹೇಳಿದ್ದೇನು?
ಛತ್ತೀಸ್ಗಢದ ಬಸ್ತರ್ನಲ್ಲಿರುವ ಸಿಆರ್ಪಿಎಫ್ ಶಿಬಿರದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ್ದ ಪ್ರಧಾನಿ ಮೋದಿ, ಸಶಸ್ತ್ರ ಮಾವೋವಾದಿಗಳನ್ನು ಕಾಡುಗಳಿಂದ ನಿರ್ಮೂಲನೆ ಮಾಡಲಾಗುತ್ತಿದ್ದರೂ, ‘ದಿಮಾಗಿ ನಕ್ಸಲರು’ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಲ್ಲಿ ನುಸುಳಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಹೇಳಿದ್ದರು.
ಯೋಧರ ಸಾವಿನ ಅಂಕಿ ಮುಂದಿಟ್ಟು ಬಿಜೆಪಿಯಿಂದ ತಿರುಗೇಟು
ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ತುಹಿನ್ ಸಿನ್ಹಾ, 1987ರಿಂದ 2025ರವರೆಗೆ ನಕ್ಸಲ್ ದಾಳಿಗಳಲ್ಲಿ 719 ಸಿಆರ್ಪಿಎಫ್ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. 2010ರ ಏಪ್ರಿಲ್ 6ರಂದು ಒಂದೇ ರಾತ್ರಿ 74 ಯೋಧರು ಹುತಾತ್ಮರಾಗಿದ್ದ ಘಟನೆಯನ್ನೂ ಅವರು ನೆನಪಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಕಾರ್ಯಾಚರಣೆ ವೇಳೆ ಯೋಧರ ಸಾವು ಶೂನ್ಯಕ್ಕೆ ಇಳಿದಿದೆ ಎಂದು ಹೇಳಿರುವ ಸಿನ್ಹಾ, ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ನಿರ್ಲಕ್ಷ್ಯವೇ ಹೆಚ್ಚಿನ ಸಾವುಗಳಿಗೆ ಕಾರಣ ಎಂದು ಆರೋಪಿಸಿದ್ದಾರೆ. ಹುತಾತ್ಮ ಯೋಧರ ಕುಟುಂಬಗಳ ನೋವನ್ನು ರಾಹುಲ್ ಗಮನಿಸಿದ್ದಾರೆಯೇ ಎಂದೂ ಪ್ರಶ್ನಿಸಿದ್ದಾರೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆ, ಯೋಧರ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರಗಳು ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಚರ್ಚೆಯ ಕೇಂದ್ರವಾಗಿವೆ. ಉಭಯ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಮುಂದುವರಿಸಿರುವುದರಿಂದ ಈ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.



