November 9, 2026
Monday, November 9, 2026
spot_img

ಆರ್​ಜಿವಿ ಯು-ಟರ್ನ್: ‘ಟಾಕ್ಸಿಕ್’ ನಿಂದಿಸಿದ ನಿರ್ದೇಶಕ ಈಗ ಯಶ್ ರಾವಣ ಅವತಾರಕ್ಕೆ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮ್ ಗೋಪಾಲ್ ವರ್ಮಾ ಎಂದರೆ ತಕ್ಷಣ ನೆನಪಾಗುವುದು ಅವರ ನೇರ ನಡೆ ಹಾಗೂ ವಿವಾದಾತ್ಮಕ ಹೇಳಿಕೆಗಳು. ಹಿಂದೆ ನಟ ಯಶ್ ಅವರ ‘ಟಾಕ್ಸಿಕ್’ ಸಿನಿಮಾದ ಶೀರ್ಷಿಕೆ ಬಿಡುಗಡೆಯಾದಾಗ ಅದನ್ನು ತೀವ್ರವಾಗಿ ತೆಗಳಿ ಸುದ್ದಿಯಾಗಿದ್ದ ವರ್ಮಾ, ಇದೀಗ ಅದೇ ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ನೋಡಿ ಮುಕ್ತಕಂಠದಿಂದ ಹೊಗಳಿದ್ದಾರೆ.

ನವೆಂಬರ್ 5ರಂದು ಅದ್ಧೂರಿಯಾಗಿ ತೆರೆಕಂಡ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ 1’ ಚಿತ್ರವನ್ನು ವೀಕ್ಷಿಸಿದ ನಂತರ ಆರ್​ಜಿವಿ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. “ಇದೊಂದು ಕೇವಲ ಭಕ್ತಿಪೂರ್ವಕ ಸಿನಿಮಾವಲ್ಲ, ಬದಲಿಗೆ ಇದೊಂದು ದೈವಿಕ ಶಕ್ತಿ. ಚಿತ್ರದ ಪ್ರತಿಯೊಂದು ಸನ್ನಿವೇಶವೂ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುತ್ತದೆ” ಎಂದು ಬಣ್ಣಿಸಿದ್ದಾರೆ.

ಹಿಂದೆ ಯಶ್ ಅವರನ್ನು ಟೀಕಿಸಿದ್ದ ವರ್ಮಾ, ಈ ಸಿನಿಮಾದಲ್ಲಿ ರಾವಣನಾಗಿ ಯಶ್ ಅಭಿನಯ ಕಂಡು ಸಂಪೂರ್ಣವಾಗಿ ಮಾರುಹೋಗಿದ್ದಾರೆ. “ಯಶ್ ರಾವಣನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಮತ್ತು ರಣಬೀರ್ ಕಪೂರ್ ರಾಮನ ಪಾತ್ರವಾಗಿ ಜೀವಿಸಿದ್ದಾರೆ” ಎಂದು ಪ್ರಶಂಸಿಸಿದ್ದಾರೆ. ಸೀತೆಯ ಅಪಹರಣದ ನಂತರ ರಾಮನ ದುಃಖದ ಸನ್ನಿವೇಶ ನಟನೆಯನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ.

ಇದೇ ವೇಳೆ ಚಿತ್ರಕ್ಕೆ ನಕಾರಾತ್ಮಕ ವಿಮರ್ಶೆ ನೀಡುತ್ತಿರುವ ವಿಮರ್ಶಕರ ವಿರುದ್ಧ ವರ್ಮಾ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಬೃಹತ್ ಮತ್ತು ಅದ್ಭುತ ಕಲಾಕೃತಿಯ ಮುಂದೆ ನೆಗೆಟಿವ್ ಕಾಮೆಂಟ್ ಮಾಡುವ ವಿಮರ್ಶಕರನ್ನು “ಬೊಗಳುವ ಬೀದಿ ನಾಯಿಗಳು” ಎಂದು ಖಡಕ್ ಆಗಿ ಹೇಳಿದ್ದಾರೆ. ಇಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಚಿತ್ರತಂಡಕ್ಕೆ ಧೈರ್ಯ ತುಂಬಿರುವ ಅವರು, ಬಾಲಿವುಡ್ ಅನ್ನು ಹಾಲಿವುಡ್‌ಗಿಂತಲೂ ಎತ್ತರಕ್ಕೆ ಕೊಂಡೊಯ್ದ ನಿರ್ಮಾಪಕ ನಮಿತ್ ಮಲ್ಹೋತ್ರಾಗೆ ಬಿಗ್ ಸಲ್ಯೂಟ್ ಹೊಡೆದಿದ್ದಾರೆ.

ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದ್ದು, ಆರ್​ಜಿವಿ ಅವರ ಈ ಬದಲಾದ ನಿಲುವು ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Must Read

Skip to toolbar