ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಸೋನಿಯಾ ವಿಹಾರ್ನಲ್ಲಿ ಇಂದಿನಿಂದ (ಮಂಗಳವಾರ) ಮೊದಲ ಮನರಂಜನಾ ಕ್ರೂಸ್ ಸೇವೆಯಾದ ‘ನಮೋ ಯಮುನಾ ರಿವರ್ ಸಫಾರಿ’ಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಛತ್ ಪೂಜೆಗೂ ಮುನ್ನವೇ ದೆಹಲಿ ಜನತೆಗೆ ಸಿಕ್ಕಿರುವ ಈ ಹೊಸ ಪ್ರವಾಸಿ ಕೊಡುಗೆಯ ಮೂಲಕ ಸಾರ್ವಜನಿಕರು ಸೋನಿಯಾ ವಿಹಾರ್ ಮತ್ತು ಜಗತ್ಪುರ ನಡುವೆ 6 ಕಿಲೋಮೀಟರ್ ದೂರದ ಸುಂದರ ಜಲಪ್ರವಾಸದ ಅನುಭವವನ್ನು ಪಡೆಯಬಹುದು.
ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಹಾಗೂ ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ಜಂಟಿಯಾಗಿ ಈ ಪರಿಸರ ಸ್ನೇಹಿ ಜಲಪ್ರವಾಸೋದ್ಯಮ ಯೋಜನೆಯನ್ನು ಹಮ್ಮಿಕೊಂಡಿವೆ.
ಗಣ್ಯರ ಸಮ್ಮುಖದಲ್ಲಿ ಅದ್ಧೂರಿ ಚಾಲನೆ
ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ್ ಸೋನೋವಾಲ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಚಿವ ಕಪಿಲ್ ಮಿಶ್ರಾ ಮತ್ತು ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರ ಸಮ್ಮುಖದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಶಂತನು ಠಾಕೂರ್, ಹರ್ಷ್ ಮಲ್ಹೋತ್ರಾ ಮತ್ತು ಸಂಸದ ಮನೋಜ್ ತಿವಾರಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.
ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕ್ರೂಸ್ ಬಳಕೆ
ಯಮುನಾ ನದಿಯ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಂಪೂರ್ಣವಾಗಿ ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ಕ್ರೂಸ್ ನೌಕೆಯನ್ನು ಸಫಾರಿಗೆ ಬಳಸಲಾಗುತ್ತಿದೆ. ಸಫಾರಿಗಾಗಿ ಆನ್ಲೈನ್ ಮತ್ತು ಆಫ್ಲೈನ್ ಎರಡೂ ಕಡೆಯೂ ಟಿಕೆಟ್ ಪಡೆಯಬಹುದು. ಪ್ರವಾಸಿಗರಿಗೆ ಬೆಳಗ್ಗೆ 9:00 ಗಂಟೆಯಿಂದ ಪ್ರವೇಶ ಆರಂಭವಾಗಲಿದ್ದು, ರಾತ್ರಿ 9:00 ಗಂಟೆಗೆ ಕೊನೆಯ ಟಿಕೆಟ್ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬೋಟ್ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ.
ಏನೆಲ್ಲಾ ಆಕರ್ಷಣೆಗಳಿವೆ?
ನದಿಯ ತೀರವನ್ನು ಅತ್ಯಂತ ಸುಂದರವಾದ ಮನರಂಜನಾ ವಲಯವನ್ನಾಗಿ ಮಾರ್ಪಡಿಸಲಾಗಿದ್ದು, ಸಾರ್ವಜನಿಕರಿಗೆ ಪ್ರತಿದಿನ ಸಂಜೆ ಶ್ರೀಕೃಷ್ಣ ಮತ್ತು ಯಮುನಾ ಮಾಯೆಯ ಕಥಾಹಂದರ ಹೊಂದಿರುವ ಆಕರ್ಷಕ ಸಂಗೀತ ಕಾರಂಜಿ ಪ್ರದರ್ಶನ ಇರಲಿದೆ. ಮಕ್ಕಳಿಗಾಗಿ ವಿಶೇಷ ಗೇಮಿಂಗ್ ಚಟುವಟಿಕೆಗಳು ಹಾಗೂ ಸಾಹಸ ಕ್ರೀಡೆಗಳ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರಿಗಾಗಿ ಅತ್ಯಾಧುನಿಕ ಫುಡ್ ಕೋರ್ಟ್ ಮತ್ತು ಶಾಪಿಂಗ್ ಮಳಿಗೆಗಳನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ:
ಜಲಪ್ರವಾಸೋದ್ಯಮಕ್ಕೆ ಹೊಸ ಕಳೆ
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿ ರೇಖಾ ಗುಪ್ತಾ, “ಯಮುನಾ ನದಿ ಕ್ರೂಸ್ ದೆಹಲಿಗೆ ಸಂಪೂರ್ಣ ಹೊಸ ಅನುಭವ ನೀಡಲಿದೆ. ಇದು ಯಮುನಾ ಮಾತೆಯನ್ನು ಜನರಿಗೆ ಹತ್ತಿರ ತರುವ ಮತ್ತು ದೆಹಲಿಯ ನದಿ ತೀರಕ್ಕೆ ಹೊಸ ಗುರುತು ನೀಡುವ ಮಹತ್ವದ ಹೆಜ್ಜೆಯಾಗಿದೆ” ಎಂದು ಸಂತಸ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಕ್ರೂಸ್ ಪ್ರವಾಸೋದ್ಯಮ ಮತ್ತು ಪರಂಪರೆಯ ಸಮ್ಮಿಲನವು ದೇಶದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಸೂಚಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನೂ ಈ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.



