ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಆಚರಣೆಯ ನಂತರ ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ತೀವ್ರವಾಗಿ ಹೆಚ್ಚಾಗಿದ್ದು, ಇಂದು (ಮಂಗಳವಾರ) ಇಡೀ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 307 ರಷ್ಟು ದಾಖಲಾಗುವ ಮೂಲಕ ‘ತೀರಾ ಕಳಪೆ’ ವರ್ಗಕ್ಕೆ ತಲುಪಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮುಂಜಾನೆ 7:00 ಗಂಟೆಗೆ ನೀಡಿರುವ ಅಂಕಿಅಂಶಗಳ ಪ್ರಕಾರ, ದೆಹಲಿಯ ಜನತೆ ಸದ್ಯ ಕಲುಷಿತ ಗಾಳಿಯಲ್ಲೇ ಉಸಿರಾಡುವಂತಾಗಿದೆ.
ಹಬ್ಬದ ಪಟಾಕಿ ಮಾಲಿನ್ಯದ ಜೊತೆಗೆ ಹವಾಮಾನದಲ್ಲಿ ಉಂಟಾಗಿರುವ ತಾಪಮಾನದ ಕುಸಿತ ಮತ್ತು ದಟ್ಟವಾದ ಮಂಜು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಸದ್ಯ ಮಾಲಿನ್ಯದ ಕಣಗಳನ್ನು ನಿಯಂತ್ರಿಸಲು ದೆಹಲಿ ಸರ್ಕಾರವು ಇಡೀ ರಾಜ್ಯಾದ್ಯಂತ ವಾಟರ್ ಸ್ಪ್ರಿಂಕ್ಲರ್ಗಳ ಮೂಲಕ ನೀರನ್ನು ಸಿಂಪಡಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಚಾಂದಿನಿ ಚೌಕ್ನಲ್ಲಿ ಗರಿಷ್ಠ ಮಾಲಿನ್ಯ
ದೆಹಲಿಯ ಪ್ರಸಿದ್ಧ ಚಾಂದಿನಿ ಚೌಕ್ ಪ್ರದೇಶದಲ್ಲಿ ಅತ್ಯಧಿಕ ಅಂದರೆ 395 AQI ದಾಖಲಾಗಿದ್ದು, ಇದು ತೀರಾ ಕಳಪೆ ಮಟ್ಟದಲ್ಲಿದೆ. ಇದರ ಬೆನ್ನಲ್ಲೇ ಪಂಜಾಬಿ ಬಾಗ್ನಲ್ಲಿ 355 ಹಾಗೂ ಆಯಾ ನಗರದಲ್ಲಿ 354 AQI ವರದಿಯಾಗಿದೆ. ಅದೇ ರೀತಿ ಆರ್ಕೆ ಪುರಂನಲ್ಲಿ 328 ಮತ್ತು ಸಫ್ದರ್ಜಂಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ 371 ರಷ್ಟು ವಾಯುಮಾಲಿನ್ಯ ದಾಖಲಾಗಿದೆ. ಇನ್ನು,ಆನಂದ್ ವಿಹಾರ್ (290), ಅಶೋಕ್ ವಿಹಾರ್ (278), ನರೇಲಾ (272) ಹಾಗೂ ಇಂಡಿಯಾ ಗೇಟ್ ಮತ್ತು ಕರ್ತವ್ಯ ಪಥದಲ್ಲಿ 258 AQI ದಾಖಲಾಗಿದ್ದು, ಇವು ‘ಸಾಧಾರಣ ಕಳಪೆ’ ವರ್ಗದಲ್ಲಿವೆ.
ಮುಂದಿನ 5 ದಿನ ದಟ್ಟ ಮಂಜಿನ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿಯ ಪ್ರಕಾರ, ಮಂಗಳವಾರ ಮುಂಜಾನೆ ದೆಹಲಿಯಲ್ಲಿ 17.0°C ತಾಪಮಾನ ದಾಖಲಾಗಿದ್ದು, ನಗರದಾದ್ಯಂತ ಮಂಜು ಕವಿದ ವಾತಾವರಣವಿತ್ತು. ಮುಂದಿನ 5 ದಿನಗಳ ಕಾಲ ಇದೇ ರೀತಿಯ ದಟ್ಟ ಮಂಜು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರದ ಪರಿಸ್ಥಿತಿಗೆ ಹೋಲಿಸಿದರೆ ಇಂದು ಗಾಳಿಯ ಗುಣಮಟ್ಟದಲ್ಲಿ ತುಸು ಸುಧಾರಣೆ ಕಂಡುಬಂದಿದೆ. ಏಕೆಂದರೆ ಸೋಮವಾರ ದೆಹಲಿಯ ಹಲವು ಕಡೆ ಮಾಲಿನ್ಯ ಸೂಚ್ಯಂಕ 400ರ ಗಡಿ ದಾಟಿ ‘ಅತಿ ಗಂಭೀರ’ ಮಟ್ಟ ತಲುಪಿತ್ತು.
ಇದನ್ನೂ ಓದಿ:
ನೆರೆರಾಜ್ಯಗಳ ಪರಿಸ್ಥಿತಿ ಹೇಗಿದೆ?
ದೆಹಲಿಯ ಪಕ್ಕದಲ್ಲೇ ಇರುವ ಹರಿಯಾಣದ ಅಂಬಾಲಾದಲ್ಲಿ ಒಟ್ಟಾರೆ AQI 250 ದಾಖಲಾಗಿದ್ದರೆ, ಇತ್ತ ಮಹಾರಾಷ್ಟ್ರದಲ್ಲಿ ವಾಯು ಗುಣಮಟ್ಟವು 146 ಸೂಚ್ಯಂಕದೊಂದಿಗೆ ‘ಮಧ್ಯಮ’ ವರ್ಗದಲ್ಲಿದೆ.



