ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” ಆತ್ಮಕಥೆ ಬಿಡುಗಡೆಯಾದ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ ಎದ್ದಿದೆ. ಪುಸ್ತಕದಲ್ಲಿ 1984ರ ಐತಿಹಾಸಿಕ ‘ಆಪರೇಷನ್ ಬ್ಲೂ ಸ್ಟಾರ್’ ಕುರಿತು ಮಾಡಲಾಗಿರುವ ಉಲ್ಲೇಖಗಳಿಗೆ ಅಖಾಡಕ್ಕಿಳಿದಿರುವ ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಜಂಟಿ ವಾಗ್ದಾಳಿ ನಡೆಸಿದ್ದಾರೆ.
ಸೋನಿಯಾ ಪುಸ್ತಕದಲ್ಲಿ ಬರೆದಿದ್ದೇನು?
ತಮ್ಮ ಅತ್ತೆ ಹಾಗೂ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅಮೃತಸರದ ಸ್ವರ್ಣ ಮಂದಿರದ ಮೇಲೆ ನಡೆದ ‘ಆಪರೇಷನ್ ಬ್ಲೂ ಸ್ಟಾರ್’ ದಾಳಿಯ ನಂತರದ ದೃಶ್ಯಗಳ ವಿಡಿಯೋ ರೆಕಾರ್ಡ್ ವೀಕ್ಷಿಸುತ್ತಿದ್ದ ಕ್ಷಣವನ್ನು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.
“ನನ್ನ ಅತ್ತೆ ಆ ದೃಶ್ಯಗಳನ್ನು ನೋಡುವಾಗ ಅವರ ಕಣ್ಣುಗಳಿಂದ ನೀರು ಸುರಿಯುತ್ತಿತ್ತು. ಆ ಕಣ್ಣೀರು ನೋವು ಮತ್ತು ಪಶ್ಚಾತ್ತಾಪದ್ದಾಗಿತ್ತು ಎಂದು ನಾನು ಭಾವಿಸುತ್ತೇನೆ. ಸೇನಾ ಕಾರ್ಯಾಚರಣೆ ಕೊನೆಗೊಂಡ ರೀತಿ ಮತ್ತು ಅದರಲ್ಲಿ ಅಪಾರ ಪ್ರಮಾಣದ ಜೀವಹಾನಿ ಸಂಭವಿಸಿದ್ದಕ್ಕೆ ಅವರು ತೀವ್ರ ದುಃಖಿತರಾಗಿದ್ದರು” ಎಂದು ಸೋನಿಯಾ ಗಾಂಧಿ ಬರೆದಿದ್ದಾರೆ.
“ಇದು ಕೇವಲ ವದಂತಿ, ರಾಜಕೀಯ ಹೇಳಿಕೆ” ಎಂದ ಆಪ್
ಸೋನಿಯಾ ಗಾಂಧಿ ಅವರ ಈ ಬರಹವನ್ನು ತಳ್ಳಿಹಾಕಿರುವ ಆಪ್ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್, “ಸೋನಿಯಾ ಗಾಂಧಿ ಅವರು ತಮ್ಮದೇ ಆದ ಶೈಲಿಯಲ್ಲಿ ಹಳೆಯ ಗಾಯಗಳನ್ನು ಮರೆಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.
“ಒಂದು ವೇಳೆ ಇಂದಿರಾ ಗಾಂಧಿ ಅವರೇ ಆ ಸಮಯದಲ್ಲಿ ತಮ್ಮ ಪಶ್ಚಾತ್ತಾಪವನ್ನು ನೇರವಾಗಿ ವ್ಯಕ್ತಪಡಿಸಿದ್ದರೆ ಅದಕ್ಕೊಂದು ಬೆಲೆ ಇರುತ್ತಿತ್ತು. ಈಗ ಸೋನಿಯಾ ಗಾಂಧಿ ಹೇಳುತ್ತಿರುವುದು ಕೇವಲ ವದಂತಿ ಅಷ್ಟೇ, ಇದನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಪ್ರಸ್ತುತ ರಾಜಕೀಯ ವಾತಾವರಣಕ್ಕೆ ತಕ್ಕಂತೆ ನೀಡಿರುವ ರಾಜಕೀಯ ಹೇಳಿಕೆ ಇದಾಗಿದೆ” ಎಂದು ಸೌರಭ್ ಭಾರದ್ವಾಜ್ ಕಿಡಿಕಾರಿದ್ದಾರೆ. ಇನ್ನು ರಾಜ್ಯಸಭಾ ಸಂಸದ ಸತ್ನಾಮ್ ಸಿಂಗ್ ಸಂಧು ಮಾತನಾಡಿ, “ಸ್ವರ್ಣ ಮಂದಿರದ ಮೇಲಿನ ದಾಳಿ ಹಾಗೂ ನಂತರ ದೆಹಲಿ ರಸ್ತೆಗಳಲ್ಲಿ ನಡೆದ ಸಿಖ್ಖರ ಮಾರಣಹೋಮಕ್ಕೆ ಇಂದಿಗೂ ಕಾಂಗ್ರೆಸ್ ಜವಾಬ್ದಾರಿ ಹೊತ್ತಿಲ್ಲ. ಈಗ ಇಂದಿರಾ ಗಾಂಧಿ ಕಣ್ಣೀರು ಹಾಕಿದ್ದರು ಎನ್ನುವ ಕಥೆ ಹೇಳುವ ಮೂಲಕ ಆ ವಿನಾಶದ ಹೊಣೆಯನ್ನು ಯಾರು ಹೊರುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
“ಅಧಿಕಾರದ ಹಪಾಹಪಿಗೆ ಕಾಂಗ್ರೆಸ್ ಸಾಕ್ಷಿ”:ಮುಗಿಬಿದ್ದ ಬಿಜೆಪಿ
ಇತ್ತ ಬಿಜೆಪಿ ಸಂಸದ ಭೋಲಾ ಸಿಂಗ್ ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಕಟುವಾಗಿ ಟೀಕಿಸಿದ್ದು, “ತುರ್ತು ಪರಿಸ್ಥಿತಿ ಹೇರಿಕೆ ಇರಲಿ ಅಥವಾ ಸಿಖ್ ದಂಗೆಗಳನ್ನು ಪ್ರಚೋದಿಸಿರಲಿ, ಕಾಂಗ್ರೆಸ್ ಪಕ್ಷವು ಅಧಿಕಾರದ ಹಪಾಹಪಿಗಾಗಿ ಯಾವುದೇ ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದನ್ನು ಇತಿಹಾಸ ಸಾಬೀತುಪಡಿಸಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:
ಇದೇ ವೇಳೆ ಯುಪಿಎ ಆಡಳಿತಾವಧಿಯನ್ನು ಕೆದಕಿರುವ ಅವರು, ಅಂದಿನ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರು ಕೇವಲ ಹೆಸರಿಗೆ ಮಾತ್ರ ನಾಯಕರಾಗಿದ್ದರು ಮತ್ತು ಇಡೀ ಸರ್ಕಾರವನ್ನು ಸೋನಿಯಾ ಗಾಂಧಿ ರಿಮೋಟ್ ಕಂಟ್ರೋಲ್ ಮೂಲಕ ನಡೆಸುತ್ತಿದ್ದರು ಎಂದು ಗಂಭೀರ ವಾಗ್ದಾಳಿ ನಡೆಸಿದ್ದಾರೆ.



