ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನದ ಬಹುತೇಕ ಯಾರಿಗೂ ತಿಳಿದಿರದ ಕಹಿ ಘಟನೆ ಈಗ ಬಹಿರಂಗವಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿಯಾಗಿದ್ದ ಸೋನಿಯಾ, ರಾಹುಲ್ ಗಾಂಧಿ ಜನಿಸುವುದಕ್ಕೂ ಒಂದು ವರ್ಷಕ್ಕೂ ಮುನ್ನ ತಮ್ಮ ಮೊದಲ ಗಂಡು ಮಗುವನ್ನು ಕಳೆದುಕೊಂಡಿರುವುದಾಗಿ ತಮ್ಮ ಹೊಸ ಆತ್ಮಕಥನ ‘Belonging: A Journey of Love’ನಲ್ಲಿ ಈ ನೋವಿನ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.
ಜನನದ ಸಂಭ್ರಮ ದುಃಖಮಯವಾಯಿತು
1969ರ ಜನವರಿಯಲ್ಲಿ ಸೋನಿಯಾ ಗಾಂಧಿ ಗರ್ಭಿಣಿಯಾಗಿದ್ದ ವಿಚಾರ ತಿಳಿದಾಗ ಗಾಂಧಿ ಕುಟುಂಬದಲ್ಲಿ ಸಂತಸ ಮನೆಮಾಡಿತ್ತು. ಇಂದಿರಾ ಗಾಂಧಿ ಕೂಡ ಸೊಸೆಯನ್ನು ಪ್ರೀತಿಯಿಂದ ಅಪ್ಪಿಕೊಂಡು ಸಂಭ್ರಮಿಸಿದ್ದರು. ಆದರೆ ಹೆರಿಗೆ ದಿನಾಂಕಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ಜನವರಿ 18ರಂದು ಸೋನಿಯಾ ಗಂಡು ಮಗುವಿಗೆ ಜನ್ಮ ನೀಡಿದರು.
ಅವಧಿಗೂ ಮುನ್ನ ಜನಿಸಿದ್ದರೂ ಮಗು ಆರೋಗ್ಯವಾಗಿರುವಂತೆ ಕಂಡಿತ್ತು. ಇನ್‌ಕ್ಯುಬೇಟರ್‌ನಲ್ಲಿ ಮಗುವಿನ ಮೊದಲ ಅಳುವಿನ ಧ್ವನಿ ಕೇಳಿದಾಗ ತಾಯಿ-ತಂದೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಕೆಲವೇ ಗಂಟೆಗಳಲ್ಲಿ ಮಗು ಮೃತಪಟ್ಟಿರುವ ಸುದ್ದಿ ಕುಟುಂಬವನ್ನು ಆಘಾತಕ್ಕೆ ದೂಡಿತು.
ಇದನ್ನೂ ಓದಿ:
ಮಗುವಿನ ಅಂತ್ಯಕ್ರಿಯೆಯ ನೆನಪು ಇಂದಿಗೂ ನೋವು ತರುತ್ತದೆ
ಮಗುವನ್ನು ನದಿಗೆ ಬಿಡುವ ಸಂಪ್ರದಾಯದ ಕುರಿತು ಚರ್ಚೆ ನಡೆದಾಗ ಸೋನಿಯಾ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಫಿರೋಜ್ ಗಾಂಧಿ ಅವರ ತೋಟದಲ್ಲಿ ಮಗುವನ್ನು ಸಮಾಧಿ ಮಾಡಲು ನಿರ್ಧರಿಸಲಾಯಿತು. ರಾಜೀವ್ ಗಾಂಧಿ ಮತ್ತು ಅವರ ಸಹೋದರ ಸಂಜಯ್ ಅಂತ್ಯಕ್ರಿಯೆ ನೆರವೇರಿಸಿದರು. ಗುಲಾಬಿ ಬಣ್ಣದ ಬೌಗೆನ್‌ವಿಲ್ಲಾ ಗಿಡದ ಕೆಳಗೆ ಮಗುವನ್ನು ಸಮಾಧಿ ಮಾಡಲಾಯಿತು.
ಈ ಘಟನೆ ಸೋನಿಯಾ ಅವರನ್ನು ಹಲವು ತಿಂಗಳು ಕಾಡಿತ್ತು. ಅದೇ ವರ್ಷ ಮತ್ತೆ ಗರ್ಭಿಣಿಯಾದರೂ ಕುಟುಂಬದಲ್ಲಿ ಆತಂಕವಿತ್ತು. ಆ ಗರ್ಭಧಾರಣೆಯ ಫಲವಾಗಿ 1970ರ ಜೂನ್ 19ರಂದು ರಾಹುಲ್ ಗಾಂಧಿ ಜನಿಸಿದರು.



