ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಗಿಗಳಿಗೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಕ್ಕದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾಂಟೀನ್ ಹಾಗೂ ಹಾಸ್ಟೆಲ್ ಅಡುಗೆಮನೆಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಜಿಲ್ಲಾ ಆಹಾರ ಸುರಕ್ಷತಾ ನಿಯೋಜಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡ ಈ ತಪಾಸಣೆ ಕೈಗೊಂಡಿದೆ. ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಸಿದ್ಧಪಡಿಸಿ ವಿತರಿಸಲಾಗುವ ಆಹಾರದ ಗುಣಮಟ್ಟ, ಅಡುಗೆ ತಯಾರಿಸುವ ಸ್ಥಳದ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಆಹಾರ, ಅಡುಗೆ ನೀರಿನ ಮಾದರಿ ಸಂಗ್ರಹ
ಅಡುಗೆಗೆ ಬಳಸುವ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಡುಗೆಗೆ ಬಳಸುವ ನೀರಿನ ಮಾದರಿಯನ್ನೂ ಪಡೆದು ಗುಣಮಟ್ಟ ಪರಿಶೀಲನೆಗೆ ರವಾನಿಸಲಾಗಿದೆ. ರೋಗಿಗಳಿಗೆ ನೀಡುವ ಆಹಾರವನ್ನು ಕಡ್ಡಾಯವಾಗಿ ಸ್ವಚ್ಛ ವಾತಾವರಣದಲ್ಲಿ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳು ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ:
ಬೇಕರಿಗಳ ಮೇಲೂ ಅಧಿಕಾರಿಗಳ ಕಣ್ಣು
ಇದೇ ವೇಳೆ ಮುಲ್ಕಿಯ ಕಾರ್ನಾಡ್ ಪ್ರದೇಶದ ಬೇಕರಿಗಳಲ್ಲೂ ವಿಶೇಷ ತಪಾಸಣೆ ನಡೆಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ತಯಾರಿಸಲಾಗುವ ಸಿಹಿತಿಂಡಿಗಳ ಗುಣಮಟ್ಟವನ್ನು ಪರಿಶೀಲಿಸಿದ ಅಧಿಕಾರಿಗಳು, ಕೃತಕ ಬಣ್ಣಗಳ ಬಳಕೆ ಮಾಡದಂತೆ ಬೇಕರಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಸ್ವಚ್ಛತೆ ಕಾಪಾಡದ ಬೇಕರಿಗಳಿಗೆ ನೋಟಿಸ್ ನೀಡಲಾಗಿದ್ದು, ಕೃತಕ ಬಣ್ಣ ಬಳಸಿ ತಯಾರಿಸಿರುವ ಶಂಕೆಯ ಸಿಹಿತಿಂಡಿಗಳನ್ನು ವಶಪಡಿಸಿಕೊಂಡು ಸೀಲ್ ಮಾಡಲಾಗಿದೆ. ಅವುಗಳ ಮಾದರಿಗಳನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.



