ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭ್ರಷ್ಟಾಚಾರದ ಹಾವಳಿ ಮುಂದುವರಿದಿದ್ದು, ಸಾರ್ವಜನಿಕ ಕೆಲಸಗಳಿಗಾಗಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಹತ್ತು ರೂಪಾಯಿ ಲಂಚ ಕೇಳಿದರೂ ದೂರು ನೀಡಿ ಎಂದು ಮುಖ್ಯಮಂತ್ರಿ ಕರೆ ನೀಡಿದ್ದರು. ಆದರೆ ಅವರದ್ದೇ ತವರು ಜಿಲ್ಲೆಯಾದ ರಾಮನಗರದಲ್ಲಿ ಉಪ ತಹಶೀಲ್ದಾರ್ ಒಬ್ಬರು ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಉಪ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸೋಮೇಶ್ ಲೋಕಾಯುಕ್ತ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಅಧಿಕಾರಿಯಾಗಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಹೊಂಬೇಗೌಡನದೊಡ್ಡಿ ಗ್ರಾಮದ ರಾಕೇಶ್ ಎಂಬಾತನಿಗೆ ವಂಶವೃಕ್ಷ ಪ್ರಮಾಣಪತ್ರ ನೀಡಲು ಇವರು ಲಂಚದ ಬೇಡಿಕೆ ಇಟ್ಟಿದ್ದರು.
ವರದಿಗಳ ಪ್ರಕಾರ, ಈ ವಂಶವೃಕ್ಷ ನೀಡಲು ಉಪ ತಹಶೀಲ್ದಾರ್ ಸೋಮೇಶ್ ಒಟ್ಟು 15,000 ರೂ.ಲಂಚ ಕೇಳಿದ್ದರು. ಕೊನೆಗೆ ಒಪ್ಪಂದದಂತೆ ತಮ್ಮ ಸರ್ಕಾರಿ ಕಚೇರಿಯಲ್ಲಿಯೇ ರಾಕೇಶ್ ಅವರಿಂದ 13,000 ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:
ಲೋಕಾಯುಕ್ತ ಇನ್ಸ್ಪೆಕ್ಟರ್ ಕುಮಾರ್ ನೇತೃತ್ವದ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಇದ್ದಕ್ಕಿದ್ದಂತೆ ಕಚೇರಿಗೆ ನುಗ್ಗಿದ ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಭ್ರಷ್ಟ ಅಧಿಕಾರಿ ಸೋಮೇಶ್ ಕಕ್ಕಾಬಿಕ್ಕಿಯಾಗಿದ್ದಾರೆ. ಸದ್ಯ ಅಧಿಕಾರಿ ಸೋಮೇಶ್ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.



