ಹೊಸದಿಗಂತ ಡಿಟಲ್ ಡೆಸ್ಕ್:
ದೇಶದ ಪ್ರಸಿದ್ಧ ಡೈರಿ ಬ್ರ್ಯಾಂಡ್ ‘ಅಮುಲ್’ ಹೆಸರಿನಲ್ಲಿ ಹಾಲು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವು (GCMMF) ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ತನ್ನ ಪ್ರಮುಖ ತಾಜಾ ಹಾಲಿನ ಪ್ಯಾಕೆಟ್ಗಳ ಬೆಲೆಯನ್ನು ಪ್ರತಿ ಲೀಟರ್ಗೆ 2 ರಿಂದ 4ರೂ. ರವರೆಗೆ ಹೆಚ್ಚಿಸುವುದಾಗಿ ಸಂಸ್ಥೆ ಬುಧವಾರ ಪ್ರಕಟಿಸಿದೆ. ಈ ಹೊಸ ದರಗಳು ನವೆಂಬರ್ 12 ರಿಂದ ದೇಶಾದ್ಯಂತ ಜಾರಿಗೆ ಬರಲಿವೆ.
ಮದರ್ ಡೈರಿ ಬೆನ್ನಲ್ಲೇ ಅಮುಲ್ ಶಾಕ್
ಸಂಸ್ಥೆಯ ಪ್ರಕಟಣೆಯ ಪ್ರಕಾರ, ಅಮುಲ್ನ ವಿವಿಧ ತಳಿಯ ಹಾಲಿನ ಪ್ಯಾಕೆಟ್ಗಳ ಮೇಲೆ ಶೇಕಡಾ 4 ರಿಂದ 5 ರಷ್ಟು ಬೆಲೆ ಏರಿಕೆಯಾಗಿದೆ. ಕಳೆದ ಮೇ 2026ರ ಬಳಿಕ ಅಮುಲ್ ಕಂಪನಿಯು ಕೈಗೊಂಡಿರುವ ಮೊದಲ ಹಾಲಿನ ದರ ಏರಿಕೆ ಇದಾಗಿದೆ. ದೆಹಲಿ ಮೂಲದ ಪ್ರಮುಖ ಡೈರಿ ಸಂಸ್ಥೆ ‘ಮದರ್ ಡೈರಿ’ ತನ್ನ ಹಾಲಿನ ದರವನ್ನು ಹೆಚ್ಚಿಸಿದ ಕೆಲವೇ ಗಂಟೆಗಳಲ್ಲಿ ಅಮುಲ್ ಕೂಡ ಈ ನಿರ್ಧಾರ ಪ್ರಕಟಿಸಿದೆ.
ಲೀಟರ್ ಹಾಲಿನ ಹೊಸ ದರ ಪಟ್ಟಿ
ಈ ಬೆಲೆ ಪರಿಷ್ಕರಣೆಯಿಂದಾಗಿ ಅಮುಲ್ ಗೋಲ್ಡ್, ಅಮುಲ್ ತಾಜಾ, ಅಮುಲ್ ಶಕ್ತಿ ಮತ್ತು ಅಮುಲ್ ಟೀ ಸ್ಪೆಷಲ್ ಹಾಲಿನ ದರಗಳು ಬದಲಾಗಲಿವೆ. ಹೊಸ ದರ ಪಟ್ಟಿಯ ಪ್ರಕಾರ, ಅಮುಲ್ ತಾಜಾ (ಟೋನ್ಡ್ ಮಿಲ್ಕ್) ಲೀಟರ್ಗೆ 2 ರೂ.ಹೆಚ್ಚಳವಾಗಿ 62 ತಲುಪಿದೆ. ಇನ್ನು ಹೆಚ್ಚಿನ ಬೇಡಿಕೆಯಿರುವ ಅಮುಲ್ ಗೋಲ್ಡ್ (ಫುಲ್ ಕ್ರೀಮ್) ಹಾಲಿನ ಬೆಲೆ ಲೀಟರ್ಗೆ 4 ರೂ.ಅಷ್ಟು ದುಬಾರಿಯಾಗಿದ್ದು, ಇನ್ಮುಂದೆ ಗ್ರಾಹಕರು ಪ್ರತಿ ಲೀಟರ್ಗೆ 80 ರೂ.ನೀಡಬೇಕಾಗುತ್ತದೆ.
ಬೆಲೆ ಏರಿಕೆಗೆ ಕಾರಣವೇನು?
ಕಳೆದ ಒಂದು ವರ್ಷದಿಂದ ಹಾಲಿನ ಉತ್ಪಾದನೆ, ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಇಂಧನ ಸಾಗಣೆಯ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಅಮುಲ್ ಸಮರ್ಥಿಸಿಕೊಂಡಿದೆ. ಹಸಿರು ಮತ್ತು ಒಣ ಮೇವು, ದನಗಳ ಆಹಾರದ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಇದರೊಂದಿಗೆ ದೇಶದ ಹಲವು ಭಾಗಗಳಲ್ಲಿ ಅಸಮರ್ಪಕ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಉತ್ತಮ ಖರೀದಿ ದರವನ್ನು ನೀಡಲು ಗ್ರಾಹಕರ ಮೇಲಿನ ದರವನ್ನು ಹೆಚ್ಚಿಸಬೇಕಾಯಿತು ಎಂದು ಸಂಸ್ಥೆ ವಿವರಿಸಿದೆ.
ಇದನ್ನೂ ಓದಿ:
ರೈತರಿಗೆ ಸಿಗಲಿದೆ ಆದಾಯದ ಶೇ. 80 ರಷ್ಟು ಪಾಲು
ಗ್ರಾಹಕರಿಂದ ಸಂಗ್ರಹಿಸುವ ಒಟ್ಟು ಆದಾಯದಲ್ಲಿ ಶೇಕಡಾ 80 ರಷ್ಟು ಹಣವನ್ನು ಅಮುಲ್ ಸಂಸ್ಥೆಯು ನೇರವಾಗಿ ತನ್ನ 36 ಲಕ್ಷ ಹಾಲು ಉತ್ಪಾದಕ ರೈತರಿಗೆ ಹಿಂದಿರುಗಿಸುತ್ತದೆ. ಈ ಬಾರಿ ಹೆಚ್ಚಿಸಲಾಗಿರುವ ಹಾಲಿನ ಚಿಲ್ಲರೆ ಮಾರಾಟ ದರದ ಬಹುದೊಡ್ಡ ಪಾಲು ಮತ್ತೆ ಹಾಲು ಉತ್ಪಾದಕ ರೈತರಿಗೆ ತಲುಪಲಿದ್ದು, ಇದು ಅವರು ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.



