ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 11, 2026ರಂದು ಗ್ರೀಸ್‌ನಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮದುವೆಯ ಮೊದಲ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಈ ಜೋಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ತಮ್ಮ ಮದುವೆಯ ವಿಶೇಷ ಕ್ಷಣವನ್ನು ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತ್ನಿ ಕಾವ್ಯಾ ಅವರೊಂದಿಗೆ ಇರುವ ಸುಂದರ ಚಿತ್ರಕ್ಕೆ, “ನನ್ನ ಜೀವನದಲ್ಲಿ ಒಮ್ಮೆ ಸಿಕ್ಕವರು, ಜೀವನಪೂರ್ತಿ ನನ್ನೊಂದಿಗಿರುವವರು” ಎಂಬ ಅರ್ಥ ಬರುವ ಪ್ರೀತಿಯ ಸಾಲನ್ನು ಬರೆದುಕೊಂಡಿದ್ದಾರೆ. ಜೊತೆಗೆ 11.11 ಎಂಬ ದಿನಾಂಕವನ್ನೂ ಉಲ್ಲೇಖಿಸಿದ್ದಾರೆ. ಈ ಚಿತ್ರ ಹೊರಬರುತ್ತಿದ್ದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
https://www.instagram.com/p/DfmrH_8N5M1/?utm_source=ig_web_button_share_sheet
ಗ್ರೀಸ್‌ನ ಸುಂದರ ತಾಣದಲ್ಲಿ ನಡೆದ ಮದುವೆಯಲ್ಲಿ ಅನಿರುದ್ಧ್ ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರೆ, ಕಾವ್ಯಾ ಅದಕ್ಕೆ ಹೊಂದಾಣಿಕೆಯಾಗುವ ಬಣ್ಣದ ಅಲಂಕೃತ ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ. ಹೂವಿನ ರಾಶಿಯ ನಡುವೆ ನವ ಜೋಡಿ ನಡೆದುಕೊಂಡು ಬರುವ ದೃಶ್ಯ ಮದುವೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಈ ಮದುವೆಯ ಚಿತ್ರಗಳನ್ನು ಸನ್ ಪಿಕ್ಚರ್ಸ್ ಸಂಸ್ಥೆಯೂ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಷ್ಟೇ ಅಲ್ಲದೆ ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ವರದಿಗಳ ಪ್ರಕಾರ, ನವೆಂಬರ್ 10ರಂದು ಉಂಗುರ ಬದಲಿಸಿಕೊಂಡಿದ್ದ ಈ ಜೋಡಿ ಮರುದಿನವೇ ಮದುವೆಯಾಗಿದೆ. ಇದೀಗ ನವೆಂಬರ್ 21ರಂದು ಐಷಾರಾಮಿ ಹೊಟೇಲ್ ನಲ್ಲಿ ಆರತಕ್ಷತೆ ಆಯೋಜಿಸುವ ನಿರೀಕ್ಷೆಯಿದೆ. ಈ ಸಮಾರಂಭಕ್ಕೆ ಕಮಲ್ ಹಾಸನ್, ಸಿಎಂ ವಿಜಯ್, ಅಲ್ಲು ಅರ್ಜುನ್, ಅಜಿತ್ ಕುಮಾರ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಆಗಮಿಸುವ ಸಾಧ್ಯತೆಯಿದೆ.
ಒಟ್ಟಿನಲ್ಲಿ, ಸಂಗೀತದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದ ಅನಿರುದ್ಧ್ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿರುವುದು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.



