ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್ಲೈನ್ ಶಾಪಿಂಗ್ ಆಫರ್ಗಳಲ್ಲಿ ಸಣ್ಣಪುಟ್ಟ ವಸ್ತುಗಳು ಕಡಿಮೆ ಬೆಲೆಗೆ ಸಿಗುವುದನ್ನು ನಾವು ಕೇಳಿದ್ದೇವೆ. ಆದರೆ ಚೀನಾದಲ್ಲಿ ವ್ಯಕ್ತಿಯೊಬ್ಬರಿಗೆ ಆನ್ಲೈನ್ ಶಾಪಿಂಗ್ ಹಬ್ಬದ ವೇಳೆ ನಂಬಲಸಾಧ್ಯವಾದ ಬಂಪರ್ ಕೊಡುಗೆಯೊಂದು ಸಿಕ್ಕಿದೆ. ದೇಶದ ಪ್ರಸಿದ್ಧ ‘ಡಬಲ್ 11’ ಶಾಪಿಂಗ್ ಸೀಸನ್ ಅಂಗವಾಗಿ ನಡೆದ ಹರಾಜಿನಲ್ಲಿ ಗ್ರಾಹಕರೊಬ್ಬರು ಈಶಾನ್ಯ ಚೀನಾದಲ್ಲಿರುವ ಎರಡು ಬೆಡ್ರೂಮ್ಗಳ ಸುಂದರ ಫ್ಲ್ಯಾಟ್ ಅನ್ನು ಕೇವಲ 11 ಯುವಾನ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 154 ರೂ. ಗೆ ಖರೀದಿಸಿ ಜಾಗತಿಕವಾಗಿ ಸುದ್ದಿಯಾಗಿದ್ದಾರೆ.
ಕೇವಲ 154 ಕ್ಕೆ ಮನೆ ಸಿಕ್ಕಿದ್ದು ಹೇಗೆ?
ಅಲಿಬಾಬಾ ಆಕ್ಷನ್ ಪ್ಲಾಟ್ಫಾರ್ಮ್ ತನ್ನ ಪ್ರಚಾರದ ಭಾಗವಾಗಿ ಹೈಲಾಂಗ್ಜಿಯಾಂಗ್ ಪ್ರಾಂತ್ಯದ ವಸತಿ ಕಟ್ಟಡವೊಂದರ 7ನೇ ಮಹಡಿಯಲ್ಲಿರುವ 68 ಚದರ ಮೀಟರ್ ವಿಸ್ತೀರ್ಣದ ಅಪಾರ್ಟ್ಮೆಂಟ್ ಅನ್ನು ಹರಾಜಿಗಿಟ್ಟಿತ್ತು. ಕೇವಲ 1 ಯುವಾನ್ನಿಂದ ಆರಂಭವಾದ ಈ ಹರಾಜಿಗೆ ಗರಿಷ್ಠ ಮಿತಿಯನ್ನು 11 ಯುವಾನ್ ಎಂದು ನಿಗದಿಪಡಿಸಲಾಗಿತ್ತು. ಅಂದರೆ ಯಾರು ಮೊದಲು 11 ಯುವಾನ್ ಬಿಡ್ ಮಾಡುತ್ತಾರೋ ಅವರಿಗೆ ಮನೆ ಸಿಗುವ ನಿಯಮವಿತ್ತು. ಈ ವಿಶೇಷ ಹರಾಜಿನಲ್ಲಿ ಭಾಗವಹಿಸಿದ್ದ 1,677 ಜನರಲ್ಲಿ ಜಿಯಾಂಗ್ಸು-ಝೆಜಿಯಾಂಗ್ ಪ್ರದೇಶದ ಅನಾಮಧೇಯ ವ್ಯಕ್ತಿಯೊಬ್ಬರು ಅತ್ಯಂತ ವೇಗವಾಗಿ ಗರಿಷ್ಠ ಮೊತ್ತವನ್ನು ಬಿಡ್ ಮಾಡಿ ಜಯಶಾಲಿಯಾದರು.
ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆ
ಸ್ಥಳೀಯ ರಿಯಲ್ ಎಸ್ಟೇಟ್ ಆಪ್ಗಳ ಪ್ರಕಾರ, ಈ ಫ್ಲ್ಯಾಟ್ನ ನಿಜವಾದ ಮಾರುಕಟ್ಟೆ ಮೌಲ್ಯ ಸುಮಾರು 40,000 ಯುವಾನ್ (ಅಂದಾಜು 4.7 ಲಕ್ಷ) ಆಗಿತ್ತು. ಆದರೆ ಪ್ರಚಾರದ ಗಿಮಿಕ್ಗಾಗಿ ಅಲಿಬಾಬಾ ಸಂಸ್ಥೆಯು ಇಷ್ಟು ಕಡಿಮೆ ಬೆಲೆಗೆ ಮನೆ ನೀಡಿದ್ದು, ಉಳಿದ ವ್ಯತ್ಯಾಸದ ಮೊತ್ತವನ್ನು ಕಂಪನಿಯೇ ಸಬ್ಸಿಡಿ ರೂಪದಲ್ಲಿ ಭರಿಸಿದೆ. ಅದೃಷ್ಟವಂತ ಗ್ರಾಹಕನು ಕೇವಲ 154ರೂ. ಬಿಡ್ ಮಾಡಿದ್ದರೂ, ಮನೆಯ ಮಾಲೀಕತ್ವವನ್ನು ತನ್ನ ಹೆಸರಿಗೆ ಬದಲಾಯಿಸಿಕೊಳ್ಳಲು ಸುಮಾರು 28,000ರೂ. ಮುದ್ರಾಂಕ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಾಗಿದೆ.
ಚಳಿಗಾಲದ ರಜಾದಿನಗಳ ವಿಶ್ರಾಂತಿ ಗೃಹ
ವಿಜೇತ ಗ್ರಾಹಕನು ಹರಾಜಿನ ಲೈವ್ಸ್ಟ್ರೀಮ್ನಲ್ಲಿ ಮಾತನಾಡಿ, ತಾನು ಈ ಪ್ರಾಂತ್ಯಕ್ಕೆ ಶಾಶ್ವತವಾಗಿ ವಾಸಿಸಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಿಗೆ, ಈ ಫ್ಲ್ಯಾಟ್ ಅನ್ನು ಕೇವಲ ಚಳಿಗಾಲದ ಪ್ರವಾಸಗಳ ಸಮಯದಲ್ಲಿ ರಜಾದಿನಗಳನ್ನು ಕಳೆಯುವ ವಿಶ್ರಾಂತಿ ಗೃಹವಾಗಿ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇಂಟರ್ನೆಟ್ನಲ್ಲಿ ಈ ಸುದ್ದಿ ಭಾರೀ ಸಂಚಲನ ಮೂಡಿಸಿದ್ದು, ಅನೇಕರು ಇಷ್ಟು ಕಡಿಮೆ ಬೆಲೆಗೆ ಮನೆ ಸಿಕ್ಕಿದ್ದಕ್ಕೆ ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಆದರೆ ಕಾನೂನು ತಜ್ಞರು ಇಂತಹ ಅತಿ ಕಡಿಮೆ ಬೆಲೆಯ ಹರಾಜುಗಳ ಹಿಂದೆ ತೆರಿಗೆ ಬಾಕಿ ಅಥವಾ ಮಾಲೀಕತ್ವದ ವಿವಾದಗಳಿರುವ ಅಪಾಯವಿರುತ್ತದೆ ಎಂದು ಎಚ್ಚರಿಸಿದ್ದಾರೆ.



