ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ‘ಇಂಡಿಯನ್ 2’ ಚಿತ್ರದ ಚಿತ್ರೀಕರಣದ ವೇಳೆ ನಡೆದ ಭೀಕರ ಕ್ರೇನ್ ದುರಂತವನ್ನು ನಟಿ ಕಾಜಲ್ ಅಗರ್ವಾಲ್ ಇದೀಗ ನೆನಪಿಸಿಕೊಂಡಿದ್ದಾರೆ. ಮೂವರು ತಂತ್ರಜ್ಞರ ಪ್ರಾಣ ಬಲಿಪಡೆದ ಆ ಕರಾಳ ರಾತ್ರಿಯಲ್ಲಿ ತಾವು ಸಾವಿನ ದವಡೆಯಿಂದ ಪಾರಾದ ರೋಚಕ ಹಾಗೂ ಭಯಾನಕ ಅನುಭವವನ್ನು ‘ಹ್ಯೂಮನ್ಸ್ ಆಫ್ ಬಾಂಬೆ’ ಸಂದರ್ಶನದಲ್ಲಿ ಕಾಜಲ್ ಹಂಚಿಕೊಂಡಿದ್ದಾರೆ.
2020ರ ಫೆಬ್ರವರಿಯಲ್ಲಿ ಚೆನ್ನೈ ಸಮೀಪದ ಇವಿಪಿ ಫಿಲ್ಮ್ ಸಿಟಿಯಲ್ಲಿ ‘ಇಂಡಿಯನ್ 2’ ಚಿತ್ರದ ಭರ್ಜರಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಕಾಜಲ್ ಅಗರ್ವಾಲ್ 80 ವರ್ಷದ ವೃದ್ಧೆಯ ಮೇಕಪ್ನಲ್ಲಿ ಸಜ್ಜಾಗಿ, ಮಾನಿಟರ್ ಹಿಂದಿನ ಟೆಂಟ್ನಲ್ಲಿ ಕುಳಿತಿದ್ದರು. ಇದ್ದಕ್ಕಿದ್ದಂತೆ ಸೆಟ್ನಲ್ಲಿದ್ದವರೆಲ್ಲರೂ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಏನಾಗುತ್ತಿದೆ ಎಂದು ತಿಳಿಯದ ಕಾಜಲ್ ಕೂಡ ಓಡಲು ಶುರುಮಾಡಿದರು. ಆ ಗಡಿಬಿಡಿಯಲ್ಲಿ ಅವರು ಟೇಬಲ್ಗೆ ಎಡವಿ ಬಿದ್ದರು.
ಎಡವಿ ಬಿದ್ದ ತಕ್ಷಣ, “ನಾನು ಯಾಕೆ ಓಡುತ್ತಿದ್ದೇನೆ? ಒಮ್ಮೆ ಹಿಂದೆ ತಿರುಗಿ ನೋಡೋಣ” ಎಂದು ಕಾಜಲ್ ತಲೆ ತಿರುಗಿಸಿದರು. ಆಗ ಸುಮಾರು 100 ಅಡಿ ಎತ್ತರದ ಬೃಹತ್ ಕ್ರೇನ್ ನೇರವಾಗಿ ತಮ್ಮ ಮೇಲೆಯೇ ಬೀಳುತ್ತಿರುವುದನ್ನು ಕಂಡು ಭಯದಿಂದ ಸ್ತಬ್ಧರಾದರು. “ಇದೆಲ್ಲವೂ ಕ್ಷಣಾರ್ಧದಲ್ಲಿ ನಡೆದುಹೋಯಿತು. ನಾನು ಹೆದರಿ ನಡುಗುತ್ತಿದ್ದೆ. ಆಗ ಯಾರೋ ಬಂದು ನನ್ನ ಕೈ ಹಿಡಿದು ಟೆಂಟ್ನಿಂದ ಹೊರಕ್ಕೆ ಎಳೆದರು. ಮರುಕ್ಷಣವೇ ಆ ಬೃಹತ್ ಕ್ರೇನ್ ನನ್ನ ಪಕ್ಕದಲ್ಲೇ ಬಂದು ಅಪ್ಪಳಿಸಿತು” ಎಂದು ಕಾಜಲ್ ವಿವರಿಸಿದ್ದಾರೆ.
ಕ್ರೇನ್ ಬಿದ್ದ ನಂತರ ಕಾಜಲ್ ನಡುಗುತ್ತಾ ಸುತ್ತಮುತ್ತ ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ತಕ್ಷಣ ಓಡಿಬಂದ ತಮ್ಮ ಸಿಬ್ಬಂದಿಯನ್ನು “ನನ್ನನ್ನು ಹೊರಗೆ ಎಳೆದದ್ದು ನೀವೇನಾ?” ಎಂದು ಕಾಜಲ್ ಕೇಳಿದರು. ಆದರೆ ಅವರೆಲ್ಲರೂ ದೂರದಲ್ಲಿದ್ದರು. “ಆ ಸಮಯದಲ್ಲಿ ನನ್ನನ್ನು ಹೊರಗೆ ಎಳೆದ ಆ ಕೈ ಯಾರದ್ದು ಎಂದು ನನಗೆ ಇಂದಿಗೂ ತಿಳಿದಿಲ್ಲ. ಆ ದುರಂತದಲ್ಲಿ ಮೊದಲು ಬಲಿಯಾಗಬೇಕಿದ್ದವಳು ನಾನೇ ಆಗಿದ್ದೆ. ಆದರೆ ಯಾವುದೋ ಒಂದು ದೈವಿಕ ಶಕ್ತಿ ನನ್ನನ್ನು ಕಾಪಾಡಿದೆ. ನಾನು ಇಂದು ಬದುಕಿದ್ದೇ ದೊಡ್ಡ ಪವಾಡ” ಎಂದು ಕಾಜಲ್ ಭಾವುಕರಾಗಿ ಹೇಳಿದ್ದಾರೆ.
ಈ ಭೀಕರ ದುರಂತದಲ್ಲಿ ಸಹಾಯಕ ನಿರ್ದೇಶಕ ಸೇರಿದಂತೆ ಮೂವರು ಸಿಬ್ಬಂದಿ ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿದ್ದರು. ಬಳಿಕ ಕಮಲ್ ಹಾಸನ್ ಹಾಗೂ ನಿರ್ಮಾಣ ಸಂಸ್ಥೆ ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಿತ್ತು. ಇನ್ನು 2024ರಲ್ಲಿ ಬಿಡುಗಡೆಯಾದ ‘ಇಂಡಿಯನ್ 2’ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ, ವಿಶ್ವದಾದ್ಯಂತ 150 ಕೋಟಿ ರೂಪಾಯಿ ಗಳಿಸಿ ಆ ವರ್ಷದ ಐದನೇ ಅತಿ ಹೆಚ್ಚು ಗಳಿಕೆಯ ತಮಿಳು ಚಿತ್ರವಾಗಿ ಹೊರಹೊಮ್ಮಿತು.



