November 13, 2026
Friday, November 13, 2026
spot_img

ಮೈಸೂರಿನಲ್ಲಿ ಪ್ರಧಾನಿ ಮೋದಿಯಿಂದ ವಿಶ್ವದ ಮೊದಲ ಟಿಲ್ಟೆಡ್‌ ಎಲ್‌ಇಡಿ ತಾರಾಲಯ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಂಸ್ಕೃತಿಕ ನಗರಿ ಮೈಸೂರಿನ ಹೆಮ್ಮೆ ದುಪ್ಪಟ್ಟಾಗಲಿದ್ದು, ವಿಶ್ವದಲ್ಲೇ ಎಲ್ಲೂ ಇಲ್ಲದ ಟಿಲ್ಟೆಡ್‌ ಎಲ್‌ಇಡಿ ಡೋಮ್‌ ಪ್ಲಾನಿಟೋರಿಯಂ ಇಂದು ಲೋಕಾರ್ಪಣೆಯಾಗಲಿದೆ.

ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ನಿರ್ಮಾಣಗೊಂಡಿರುವ ಈ ಅತ್ಯಾಧುನಿಕ ತಾರಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ವಿಶ್ವದ ಮೊದಲ 15 ಡಿಗ್ರಿ ಓರೆಯಾದ ಎಲ್‌ಇಡಿ ಡೋಮ್ ಪ್ಲಾನೆಟೋರಿಯಂ ಇದಾಗಿದೆ. ಇಂದು ಮಧ್ಯಾಹ್ನ ಪ್ರಧಾನಿ ಮೋದಿ ಮೈಸೂರಿನ ಲಲಿತಮಹಲ್‌ ಪ್ಯಾಲೇಸ್‌ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಇದಾದ ನಂತರ ರಸ್ತೆ ಮಾರ್ಗದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪದ ತಾರಾಲಯದ ಆವರಣಕ್ಕೆ ತೆರಳಲಿದ್ದಾರೆ.

ಸಂಜೆ 3.50ಕ್ಕೆ ನೂತನ ತಾರಾಲಯವನ್ನ ಉದ್ಘಾಟಿಸಲಿರುವ ಪ್ರಧಾನಿ, ಬಳಿಕ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಭದ್ರತಾ ದೃಷ್ಟಿಯಿಂದ ಸಭೆಗೆ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ತಾರಾಲಯದ ಪಕ್ಕದಲ್ಲಿ ಸುಮಾರು 8 ಸಾವಿರ ಜನರು ಭಾಗವಹಿಸಬಹುದಾದ ಬೃಹತ್ ವೇದಿಕೆಯನ್ನ ನಿರ್ಮಿಸಲಾಗಿದೆ.

ಮೈಸೂರು ಯುನಿವರ್ಸಿಟಿಯ ಶ್ರೀ ಜಯಚಾಮರಾಜ ಒಡೆಯರ್‌ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ಪ್ಲಾನಿಟೋರಿಯಂ ನಿರ್ಮಾಣವಾಗಿದೆ. ಇದಕ್ಕಾಗಿ ಮೈಸೂರು ವಿವಿ ಮೂರು ಎಕರೆ ಭೂಮಿಯನ್ನು ನೀಡಿದೆ. ಒಟ್ಟಾರೆ 120 ಕೋಟಿ ರೂಪಾಯಿ ಪ್ರಾಜೆಕ್ಟ್‌ ಇದಾಗಿದೆ. ಈ ತಾರಾಯದ ವಿನ್ಯಾಸವೇ ಇದರ ಬಹುದೊಡ್ಡ ವಿಶೇಷತೆಯಾಗಿದೆ. ಎಲ್‌ಇಡಿ ತಾರಾಲಯಗಳು ಇರಬಹುದು ಆದರೆ ವಿಶ್ವದಲ್ಲೇ ಮೊದಲ ಬಾರಿಗೆ 15 ಡಿಗ್ರಿ ಓರೆಯಾದ ಎಲ್‌ಇಡಿ ಡೋಮ್ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಸುಮಾರು 15 ಮೀಟರ್ ವ್ಯಾಪ್ತಿಯ ಗುಮ್ಮಟವನ್ನು ಸಂಪೂರ್ಣವಾಗಿ ಎಲ್‌ಇಡಿ ಪ್ಯಾನೆಲ್‌ಗಳಿಂದ ನಿರ್ಮಿಸಲಾಗಿದೆ. ಸಾಮಾನ್ಯ ತಾರಾಲಯಗಳಲ್ಲಿ ಬಳಸುವ ಪ್ರೊಜೆಕ್ಟರ್ ತಂತ್ರಜ್ಞಾನಕ್ಕೆ ಬದಲಾಗಿ, ಇಲ್ಲಿ ನೇರವಾಗಿ ಎಲ್‌ಇಡಿ ಡೋಮ್‌ನಲ್ಲೇ ಆಕಾಶಕಾಯಗಳ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಗುತ್ತದೆ. 8K ರೆಸಲ್ಯೂಶನ್ ತಂತ್ರಜ್ಞಾನದ ಮೂಲಕ ಗ್ರಹಗಳು, ನಕ್ಷತ್ರಗಳು, ಗೆಲಾಕ್ಸಿಗಳು ಸೇರಿದಂತೆ ಬ್ರಹ್ಮಾಂಡದ ಅದ್ಭುತ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ.

Must Read