ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಂಕ್ ಮೆಟ್ರೋ ಲೋಕಾರ್ಪಣೆ ಮಾಡಲು ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮೋದಿ ಅವರು ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫ್ಲೆಕ್ಸ್ ವಾರ್ ಆರಂಭವಾಗಿದೆ.
ಉಭಯ ಪಕ್ಷದ ನಾಯಕರು ಫ್ಲೆಕ್ಸ್‌ಗಳನ್ನು ಅಳವಡಿಸುವ ವಿಚಾರದಲ್ಲಿ ಭಾರೀ ಪೈಪೋಟಿ ಮಾಡುತ್ತಿದ್ದು, ಪ್ರಧಾನಿ ಮೋದಿ ಸಂಚರಿಸುತ್ತಿರುವ ರಸ್ತೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಡೈರಿ ಸರ್ಕಲ್‌ನಿಂದ ಆರಂಭವಾದ ಫ್ಲೆಕ್ಸ್‌ಗಳು ಪಿಂಕ್ ಲೈನ್ ಮೆಟ್ರೋದಷ್ಟು ಉದ್ದಕ್ಕೂ ಹರಡಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಫ್ಲೆಕ್ಸ್ ಹಾಕಿದ್ದರೆ, ಪ್ರಧಾನಿ ಅವರ ಪರವಾಗಿ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಹಾಕಿದ್ದಾರೆ.
ಡಿಕೆಶಿ ಅವರಿಗೆ ಸ್ವಾಗತ ಎಂದು ಬರೆದು ಸಚಿವರ ಫೋಟೊ ಹಾಗೂ ಫ್ಲೆಕ್ಸ್ ಹಾಕಿಸಿದವರ ಫೋಟೊಗಳು ಕಾಣಸಿಕ್ಕರೆ, ಪ್ರಧಾನಿ ಮೋದಿ ಅವರಿಗೆ ಸ್ವಾಗತ ಎಂದು ಬರೆದು ಬಿಜೆಪಿ ನಾಯಕರ ಫೋಟೊಗಳಿರುವ ಫ್ಲೆಕ್ಸ್‌ಗಳು ಇನ್ನೊಂದು ಕಡೆ ಇವೆ. ಬಿಜೆಪಿ ಕಾರ್ಯಕರ್ತರು ಮಾರ್ಗದುದ್ದಕ್ಕೂ ಪಕ್ಷದ ಬಾವುಟಗಳನ್ನು ಹಾಕುವ ಮೂಲಕ ಗಮನ ಸೆಳೆದಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ಬಂಟಿಂಗ್ಸ್‌ಗಳನ್ನು ಅಳವಡಿಸಿದ್ದಾರೆ. ಹೀಗೆ ಮೆಟ್ರೋ ಮಾರ್ಗದುದ್ದಕ್ಕೂ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಫ್ಲೆಕ್ಸ್‌ಗಳು, ಬಂಟಿಂಗ್ಸ್‌ಗಳು ಹಾಗೂ ಬಾವುಟಗಳು ರಾರಾಜಿಸುತ್ತಿದ್ದು, ಉದ್ಘಾಟನೆಗೂ ಮುನ್ನವೇ ರಾಜಕೀಯ ಪೈಪೋಟಿಗೆ ಸಾಕ್ಷಿಯಾಗಿದೆ.
2011ರ ಅಕ್ಟೋಬರ್ 20ರಂದು ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ 6.7 ಕಿ.ಮೀ. ಉದ್ದದ ಮಾರ್ಗದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಸಂಚಾರ ಆರಂಭವಾಗಿತ್ತು. ಅಲ್ಲಿಂದ ಹಂತ ಹಂತವಾಗಿ ವಿಸ್ತರಣೆಗೊಂಡ ನಮ್ಮ ಮೆಟ್ರೋ ಜಾಲ ಇದೀಗ 96.1 ಕಿ.ಮೀ. ಉದ್ದಕ್ಕೆ ತಲುಪಿದೆ. ಇದೀಗ ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಮೆಟ್ರೋ ಜಾಲದ ಒಟ್ಟು ಉದ್ದ 103 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಇದರಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿದೆ.



