ಹೊಸದಿಗಂತ ವರದಿ ಬಾಗಲಕೋಟೆ:
ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಬುಡಕಟ್ಟು ಸಮುದಾಯದ ಮಹಾನ್ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿ ಅಂಗವಾಗಿ ನವೆಂಬರ್ 15 ರಂದು ರಾಜ್ಯಾದ್ಯಂತ ‘ಜನಜಾತಿಯ ಗೌರವ ದಿವಸ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಗಲಿ ಬೇಡರು ಹಾಗೂ ಸಿಂಧೂರ ಲಕ್ಷ್ಮಣ ಅವರ ಮಾದರಿಯಲ್ಲಿಯೇ ಬಿರ್ಸಾ ಮುಂಡಾ ಅವರು ತಮ್ಮ 25ನೇ ವಯಸ್ಸಿನಲ್ಲಿಯೇ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಮತ್ತು ಸಮಾನತೆಗಾಗಿ ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಹಿಂದಿನ ಸರ್ಕಾರಗಳು ಇವರ ಹೋರಾಟವನ್ನು ಸ್ಮರಿಸುವ ಕೆಲಸ ಮಾಡಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು 2021ರಲ್ಲಿ ನವೆಂಬರ್ 15 ಅನ್ನು ‘ಜನಜಾತಿಯ ಗೌರವ ದಿವಸ’ ಎಂದು ಘೋಷಿಸುವ ಮೂಲಕ ಸಣ್ಣ ಸಣ್ಣ ಬುಡಕಟ್ಟು ಸಮುದಾಯಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಕೇಂದ್ರದಿಂದ ಬುಡಕಟ್ಟು ಕಲ್ಯಾಣಕ್ಕೆ ಭರಪೂರ ಅನುದಾನ:
- ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 2025ರಲ್ಲಿ 24,104 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಯೋಜನೆಗಳನ್ನು ಮೀಸಲಿಟ್ಟಿದೆ.
- ‘ಧರ್ತಿ ಆಬಾ ಅಭಿಯಾನ’ದಡಿ ಸುಮಾರು 5 ಕೋಟಿ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ.
- ದೇಶಾದ್ಯಂತ 728 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಅನುಮೋದನೆ ನೀಡಲಾಗಿದ್ದು, 508 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ (ಮಧ್ಯಪ್ರದೇಶವೊಂದರಲ್ಲೇ 63 ಶಾಲೆಗಳಿವೆ).
- ಬುಡಕಟ್ಟು ಜನಾಂಗದ ಕಲೆ, ಜಾನಪದ ಸಂಸ್ಕೃತಿಯನ್ನು ರಕ್ಷಿಸಲು ಮತ್ತು ಗೌರವಿಸಲು ವಿಶೇಷ ವಸ್ತು ಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮಗಳ ವಿವರ: - ನ. 14 (ಸಂಜೆ): ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಹಾಗೂ ಮಹರ್ಷಿ ವಾಲ್ಮೀಕಿ ಪ್ರತಿಮೆಗಳ ಆವರಣವನ್ನು ಸ್ವಚ್ಛಗೊಳಿಸಿ, ಸಂಜೆ ರಾಜ್ಯಾದ್ಯಂತ ‘ದೀಪೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
- ನ. 15 (ಬೆಳಗ್ಗೆ 11 ಗಂಟೆಗೆ): ಪಕ್ಷದ 39 ಸಂಘಟನಾತ್ಮಕ ಜಿಲ್ಲೆಗಳು ಹಾಗೂ 327 ಮಂಡಲಗಳಲ್ಲಿ ಏಕಕಾಲಕ್ಕೆ ಬಿರ್ಸಾ ಮುಂಡಾ ಜಯಂತಿ ಆಚರಿಸಲಾಗುವುದು. ಪಕ್ಷವು ಅಧಿಕಾರದಲ್ಲಿರುವ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲೂ ಜಯಂತಿ ಆಚರಣೆಗೆ ಸಿದ್ಧತೆ ನಡೆಸಲಾಗಿದೆ. ಅಲ್ಲದೆ, ಅಂದು ಬೆಳಗ್ಗೆ 11ಕ್ಕೆ ಬಳ್ಳಾರಿಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಜರುಗಲಿದೆ.
- ನ. 17: ರಾಜ್ಯದ ಮೈಸೂರು, ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಮುಂಡಾ ಸಮುದಾಯದವರು ನೆಲೆಸಿದ್ದಾರೆ. ಮೈಸೂರಿನಲ್ಲಿ ಸುಮಾರು 5,000ಕ್ಕೂ ಹೆಚ್ಚು ಬುಡಕಟ್ಟು ಜನಸಂಖ್ಯೆಯಿದ್ದು, ಅಂದು ಅಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಅಮಿತ್ ಶಾ ಅಥವಾ ರಾಜನಾಥ್ ಸಿಂಗ್ ಅವರು ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಿದರು.
ಪಕ್ಷದ ವತಿಯಿಂದ ಬಿರ್ಸಾ ಮುಂಡಾ ಅವರ ಜೀವನ ಚರಿತ್ರೆಯ ಪುಸ್ತಕಗಳನ್ನು ನೀಡಲಾಗಿದ್ದು, ಅದನ್ನು ಓದಿದ ಬಳಿಕ ಅವರ ಅಪ್ರತಿಮ ಸಾಧನೆ ಮತ್ತು ತ್ಯಾಗದ ಅರಿವಾಗಿದೆ ಎಂದು ರಾಜು ನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಟಿ ಮೋರ್ಚಾ ಅಧ್ಯಕ್ಷ ತಿಪ್ಪಣ್ಣ ಸಂಜೀವಪ್ಪಗೋಳ, ಮುಖಂಡರಾದ ಹಣಮಂತ ಪೂಜಾರ, ಲಕ್ಷ್ಮಣ ತಳವಾರ, ಶಿವಾನಂದ ಸುರಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



