November 13, 2026
Friday, November 13, 2026
spot_img

ಮೈಕ್ರೋಸಾಫ್ಟ್ ಸರ್ವರ್‌ಗಳಲ್ಲಿ ತಾಂತ್ರಿಕ ದೋಷ: ಇ-ಮೇಲ್, ಕೋಪೈಲಟ್ ಸೇವೆಗಳು ಸ್ಥಗಿತ, ಬಳಕೆದಾರರ ಪರದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆಯ ವಿವಿಧ ಡಿಜಿಟಲ್ ಸೇವೆಗಳಲ್ಲಿ ಗುರುವಾರ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರು ಪರದಾಡುವಂತಾಯಿತು. ಸಂಸ್ಥೆಯ ಪ್ರಮುಖ ಇ-ಮೇಲ್ ವೇದಿಕೆಯಾದ ‘ಔಟ್‌ಲುಕ್’, ಕಚೇರಿ ಸಂವಹನ ಆ್ಯಪ್ ‘ಟೀಮ್ಸ್’ ಹಾಗೂ ಕೃತಕ ಬುದ್ಧಿಮತ್ತೆ ಸಹಾಯಕ ‘ಕೋಪೈಲಟ್’ ಸೇವೆಗಳು ಸ್ಥಗಿತಗೊಂಡ ಪರಿಣಾಮ ದೈನಂದಿನ ಕಚೇರಿ ಕೆಲಸಗಳು ಅಸ್ತವ್ಯಸ್ತಗೊಂಡವು.

ತಾಂತ್ರಿಕ ದೋಷಗಳನ್ನು ದಾಖಲಿಸುವ ‘ಡೌನ್‌ಡಿಟೆಕ್ಟರ್’ ವೆಬ್‌ಸೈಟ್‌ನಲ್ಲಿ ಸುಮಾರು 1 ಲಕ್ಷದ 30 ಸಾವಿರಕ್ಕೂ ಹೆಚ್ಚು ಬಳಕೆದಾರರು ಔಟ್‌ಲುಕ್ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ದಾಖಲಿಸಿದ್ದಾರೆ. ಅನೇಕರಿಗೆ ಹೊಸ ಇ-ಮೇಲ್‌ಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗಲಿಲ್ಲ, ಇನ್ನು ಕೆಲವರಿಗೆ ಇನ್‌ಬಾಕ್ಸ್ ತೆರೆಯುವುದೇ ಕಷ್ಟವಾಯಿತು ಎನ್ನಲಾಗಿದೆ. ಇದರೊಂದಿಗೆ ಮೈಕ್ರೋಸಾಫ್ಟ್ 365 ಸೇವೆಗಳಲ್ಲೂ ಇದೇ ರೀತಿಯ ಅಡಚಣೆಗಳು ವರದಿಯಾಗಿವೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಸ್ಪಷ್ಟನೆ ನೀಡಿರುವ ಮೈಕ್ರೋಸಾಫ್ಟ್, ತನ್ನ ಕೆಲವು ಸರ್ವರ್‌ಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿರುವುದೇ ಈ ಸಂಪರ್ಕ ಕಡಿತಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ. ಸ್ವಯಂಚಾಲಿತ ತಪಾಸಣೆಯ ವೇಳೆ ಹಲವು ಸರ್ವರ್‌ಗಳು ಅನಿರೀಕ್ಷಿತವಾಗಿ ನಿಷ್ಕ್ರಿಯಗೊಂಡಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಕಂಪನಿ ವಿವರಿಸಿದೆ. ಆದರೆ, ಈ ಸರ್ವರ್‌ಗಳು ವಿಫಲವಾಗಲು ನಿಖರ ಕಾರಣವೇನು ಎಂಬುದನ್ನು ಸಂಸ್ಥೆ ತಕ್ಷಣಕ್ಕೆ ಬಹಿರಂಗಪಡಿಸಿಲ್ಲ. ಇದು ಯಾವುದೇ ಸೈಬರ್ ದಾಳಿಯಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

“ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲು ನಾವು ಎಲ್ಲಾ ಮಾರ್ಗಗಳಲ್ಲೂ ತೀವ್ರ ಪ್ರಯತ್ನ ನಡೆಸುತ್ತಿದ್ದೇವೆ” ಎಂದು ಮೈಕ್ರೋಸಾಫ್ಟ್ 365 ಸ್ಟೇಟಸ್ ಖಾತೆಯಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ತಾಂತ್ರಿಕ ದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಹೊಸ ಬದಲಾವಣೆಗಳನ್ನು ಪರೀಕ್ಷಿಸಲಾಗುತ್ತಿದೆ. ಉತ್ತರ ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಟೀಮ್ಸ್ ಸೇವೆಯನ್ನು ಯಶಸ್ವಿಯಾಗಿ ಪುನಃಸ್ಥಾಪಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದ್ದರೂ, ಉಳಿದ ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ನಿವಾರಿಸಿ ಸೇವೆಗಳನ್ನು ಸಹಜ ಸ್ಥಿತಿಗೆ ತರಲು ತಜ್ಞರ ತಂಡ ನಿರಂತರವಾಗಿ ಶ್ರಮಿಸುತ್ತಿದೆ.

Must Read