ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರು ಎಚ್.ವಿ ಶೇಷಾದ್ರಿ ಅವರ ಜನ್ಮಶತಮಾನೋತ್ಸವದ ಸಂಭ್ರಮದಲ್ಲಿ ಗೌರವ ನಮನಗಳನ್ನು ಸಲ್ಲಿಸಿದ್ದು, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯಕ್ಕೆ ಶೇಷಾದ್ರಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದಾರೆ.
ಆರ್ಎಸ್ಎಸ್ನಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅವರು ಅನುಸರಿಸಿದ ಧ್ಯೇಯೋದ್ದೇಶಗಳು ಇಂದಿಗೂ ಕೋಟ್ಯಂತರ ಸ್ವಯಂಸೇವಕರಿಗೆ ಪ್ರೇರಣೆ ನೀಡುತ್ತಿವೆ.ದೇಶವು ಯಶಸ್ಸಿನ ಉನ್ನತ ಶಿಖರಕ್ಕೇರಬೇಕಾದರೆ ಸಮರ್ಪಣಾ ಮನೋಭಾವ, ಸಾಮರ್ಥ್ಯ ಮತ್ತು ಶಿಸ್ತನ್ನು ಹೊಂದಿರುವ ನಾಗರಿಕರ ಅಗತ್ಯವಿದೆ ಎಂಬುದನ್ನು ಶೇಷಾದ್ರಿ ಅವರು ಅರಿತಿದ್ದರು. ಅಂತಹ ನಾಗರಿಕರನ್ನು ರೂಪಿಸುವ ಕಾರ್ಯಕ್ಕೆ ಅವರು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
ವರ್ಷಗಳ ಕಾಲ ಎಚ್.ವಿ. ಶೇಷಾದ್ರಿ ಅವರ ಪ್ರೀತಿ ಮತ್ತು ಮಾರ್ಗದರ್ಶನ ತಮಗೆ ದೊರೆತಿತ್ತು. ಅವರೊಂದಿಗೆ ಕಳೆದ ಕ್ಷಣಗಳು ಹಾಗೂ ಅವರು ಆಡಿದ ಮಾತುಗಳು ಇಂದಿಗೂ ತಮ್ಮ ಪಾಲಿಗೆ ಅಮೂಲ್ಯ ನೆನಪುಗಳಾಗಿವೆ. ನಾವು ಸಮಾಜಕ್ಕೆ ಎರಡೂ ಕೈಗಳಿಂದ ನೀಡಿದರೆ, ಸಮಾಜವು ಲಕ್ಷಾಂತರ ಕೈಗಳಿಂದ ನಮಗೆ ಮರಳಿಸುತ್ತದೆ ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು ಎಂದು ಹೇಳಿದ್ದಾರೆ.
ಡಾ. ರಾಜ್ ಕುಮಾರ್ ಯೋಗಾಭ್ಯಾಸದಲ್ಲಿ ಮಾದರಿ
ಬೆಂಗಳೂರಿನಲ್ಲಿ ಯೋಗದ ಅದ್ಭುತ ಶಕ್ತಿಯನ್ನು ಅನುಭವಿಸುವ ಅವಕಾಶ ತಮಗೆ ದೊರೆತಿದೆ. ಕರ್ನಾಟಕವು ಶತಮಾನಗಳಿಂದ ಯೋಗದ ಕೇಂದ್ರವಾಗಿದ್ದು, ಅನೇಕ ಯೋಗ ಶಿಕ್ಷಕರು ಮತ್ತು ವಿದ್ವಾಂಸರು ಇಲ್ಲಿ ಜನಿಸಿ, ಯೋಗ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ.ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಯೋಗ ಕ್ಷೇತ್ರಕ್ಕೂ ಕೊಡುಗೆ ನೀಡಿದ ವ್ಯಕ್ತಿತ್ವಗಳಿಗೆ ಉದಾಹರಣೆಯಾಗಿ ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್ಕುಮಾರ್ ಅವರನ್ನು ಉಲ್ಲೇಖಿಸಿದರು.



