November 13, 2026
Friday, November 13, 2026
spot_img

ರಾಜಮನೆತನದ ಹೆಣ್ಣುಮಕ್ಕಳಿಗೂ ಇತ್ತು ಶಸ್ತ್ರಾಸ್ತ್ರ ವಿದ್ಯೆ: ಸೀತೆ ಯೋಧೆಯಾಗುವುದರಲ್ಲಿ ತಪ್ಪೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತೇಶ್ ತಿವಾರಿ ನಿರ್ದೇಶನದ ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ, ಈ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ನಿರ್ವಹಿಸಿರುವ ಸೀತಾ ಮಾತೆಯ ಪಾತ್ರವನ್ನು ಯೋಧೆಯಂತೆ ಹಾಗೂ ಶಸ್ತ್ರಾಸ್ತ್ರ ಹಿಡಿದಿರುವಂತೆ ತೋರಿಸಿರುವುದು ದೊಡ್ಡ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿದೆ. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಟೀಕೆಗಳಿಗೆ ಚಿತ್ರದಲ್ಲಿ ಕೈಕೇಯಿ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ಲಾರಾ ದತ್ತಾ ಖಡಕ್ ಉತ್ತರ ನೀಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಲಾರಾ ದತ್ತಾ, ಪ್ರೇಕ್ಷಕರು ಸಿನಿಮಾವನ್ನು ಕೇವಲ ಒಂದು ಸಿನಿಮೀಯ ಅನುಭವವಾಗಿ ನೋಡಬೇಕೇ ಹೊರತು ವಿವಾದ ಮಾಡಬಾರದು ಎಂದಿದ್ದಾರೆ. ರಾಮಾಯಣದಲ್ಲಿ ದೇಶ-ವಿದೇಶಗಳಲ್ಲಿ ವಿವಿಧ ಆವೃತ್ತಿಗಳಿವೆ ಎಂಬುದನ್ನು ನೆನಪಿಸಿದ ಅವರು, ಪ್ರಾಚೀನ ಕಾಲದಲ್ಲಿ ರಾಜಮನೆತನಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಕಲೆಗಳ ಜೊತೆಗೆ ಕಡ್ಡಾಯವಾಗಿ ಶಸ್ತ್ರಾಸ್ತ್ರ ವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸೀತೆ ಕೂಡ ಯುದ್ಧಕಲೆಯಲ್ಲಿ ಪರಿಣತಿ ಹೊಂದಿದ್ದಳು ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

14 ವರ್ಷಗಳ ಕಾಲ ಕಾನನವಾಸಕ್ಕೆ ತೆರಳುವ ನಿರ್ಧಾರ ಕೈಗೊಂಡ ಸೀತಾ ದೇವಿ ಸಾಮಾನ್ಯರಲ್ಲ, ಆಕೆ ಅತ್ಯಂತ ಗಟ್ಟಿಗಿತ್ತಿಯಾಗಿರಲೇಬೇಕು ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ. ಅಂತಹ ಅರಣ್ಯದ ಕಠಿಣ ಪರಿಸ್ಥಿತಿ ಹಾಗೂ ಅಪಾಯಗಳ ಮಧ್ಯೆ ತನ್ನ ರಕ್ಷಣೆಗಾಗಿ ಆಕೆ ಖಂಡಿತವಾಗಿಯೂ ಆಯುಧ ಕೈಗೆತ್ತಿಕೊಳ್ಳುತ್ತಾಳೆ. ಆದ್ದರಿಂದ ಜನರು ಹೊಸತನದ ದೃಷ್ಟಿಕೋನದಿಂದ ಸಿನಿಮಾವನ್ನು ಸ್ವೀಕರಿಸಬೇಕು ಎಂದು ಲಾರಾ ದತ್ತಾ ಮನವಿ ಮಾಡಿದ್ದಾರೆ.

ಸಿನಿಮಾದಲ್ಲಿ ಸೀತೆ ಶ್ರೀರಾಮನ ಜೊತೆಗೂಡಿ ರಾಕ್ಷಸರ ವಿರುದ್ಧ ಖಡ್ಗ ಹಿಡಿದು ಹೋರಾಡುವ ಹಾಗೂ ಮಕ್ಕಳಿಗೆ ಯುದ್ಧ ತರಬೇತಿ ನೀಡುವ ದೃಶ್ಯಗಳಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಚಿತ್ರತಂಡ, ಇದು ವಾಲ್ಮೀಕಿ ರಾಮಾಯಣ ಮಾತ್ರವಲ್ಲದೆ ‘ಅದ್ಭುತ ರಾಮಾಯಣ’ ಗ್ರಂಥದಿಂದ ಪ್ರೇರಣೆ ಪಡೆದು ಸೃಷ್ಟಿಸಲಾದ ರೂಪ ಎಂದಿದೆ. ಈ ಗ್ರಂಥದಲ್ಲಿ ಸೀತೆಯು ಕಾಳಿಯ ರೂಪ ತಾಳಿ ಸಹಸ್ರ ರಾವಣನನ್ನು ಸಂಹರಿಸಿದ ಉಲ್ಲೇಖವಿದೆ. ಆದರೆ ಬಹುತೇಕರಿಗೆ ವಾಲ್ಮೀಕಿ ರಾಮಾಯಣ ಮಾತ್ರ ಪರಿಚಿತವಿರುವುದರಿಂದ, ಈ ಹೊಸ ಮತ್ತು ಪ್ರಬಲ ರೂಪಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ.

Must Read

Skip to toolbar