November 13, 2026
Friday, November 13, 2026
spot_img

ಸೌದಿ ಮೇಲೆ ಹೌತಿ ಡ್ರೋನ್ ದಾಳಿ ಎಫೆಕ್ಟ್: ರಿಯಾದ್, ದಮ್ಮಾಮ್, ಜೆದ್ದಾ ನಗರಗಳಿಗೆ ವಿಮಾನ ಸೇವೆ ತಾತ್ಕಾಲಿಕ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆಗಳು ಸೌದಿ ಅರೇಬಿಯಾದ ಪ್ರಮುಖ ನಗರಗಳಿಗೆ ತಮ್ಮ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

ಶುಕ್ರವಾರ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಂಸ್ಥೆಗಳು, ರಿಯಾದ್ ಮತ್ತು ದಮ್ಮಾಮ್ ನಗರಗಳಿಗೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನಗಳನ್ನು ನವೆಂಬರ್ 30ರವರೆಗೆ ಹಾಗೂ ಜೆದ್ದಾ ನಗರದ ವಿಮಾನ ಸೇವೆಗಳನ್ನು ನವೆಂಬರ್ 21ರವರೆಗೆ ರದ್ದುಪಡಿಸಿರುವುದಾಗಿ ತಿಳಿಸಿವೆ.

ವಿಮಾನ ರದ್ದತಿಗೆ ಕಾರಣವೇನು?

ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅರಾಮ್ಕೊ ತೈಲ ಘಟಕಗಳು ಹಾಗೂ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿವೆ. ಸೌದಿ ನೇತೃತ್ವದ ಮೈತ್ರಿಪಡೆಗಳು ಈ ಡ್ರೋನ್‌ಗಳನ್ನು ಹೊಡೆದುರುಳಿಸಿದ್ದರೂ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಪ್ರಯಾಣಿಕರಿಗೆ ಸಿಗುವ ಸೌಲಭ್ಯಗಳೇನು?

ನವೆಂಬರ್ 10ರಂದು ಅಥವಾ ಅದಕ್ಕೂ ಮೊದಲು ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ವಿಶೇಷ ವಿನಾಯಿತಿ ನೀಡಿವೆ. ಸೀಟುಗಳ ಲಭ್ಯತೆಗೆ ಅನುಗುಣವಾಗಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣದ ದಿನಾಂಕವನ್ನು ಬದಲಾಯಿಸಿಕೊಳ್ಳಬಹುದು. ಏರ್ ಇಂಡಿಯಾ ಪ್ರಯಾಣಿಕರು ಸೌದಿ ಅರೇಬಿಯಾದ ಇತರ ಕಾರ್ಯಾಚರಣೆಯ ನಿಲ್ದಾಣಗಳಿಗೆ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕರು ಸೌದಿ ಅರೇಬಿಯಾ ಅಥವಾ ಬಹ್ರೇನ್‌ನ ಇತರ ನಿಲ್ದಾಣಗಳಿಗೆ ತಮ್ಮ ಪ್ರಯಾಣವನ್ನು ಬದಲಾಯಿಸಿಕೊಳ್ಳಬಹುದು.

ಇದನ್ನೂ ಓದಿ:

ಪ್ರಯಾಣ ರದ್ದುಗೊಳಿಸಲು ಬಯಸುವವರಿಗೆ ಟಿಕೆಟ್‌ನ ಪೂರ್ಣ ಮೊತ್ತವನ್ನು ಮರಳಿಸಲಾಗುತ್ತದೆ. ರಿಯಾದ್ ಮತ್ತು ದಮ್ಮಾಮ್ ಟಿಕೆಟ್ ಹೊಂದಿರುವವರು ಡಿಸೆಂಬರ್ 14, 2026 ರವರೆಗೆ ಹಾಗೂ ಜೆದ್ದಾ ಟಿಕೆಟ್ ಹೊಂದಿರುವವರು ಡಿಸೆಂಬರ್ 5, 2026 ರವರೆಗೆ ತಮ್ಮ ಪರಿಷ್ಕೃತ ಪ್ರಯಾಣವನ್ನು ಪೂರ್ಣಗೊಳಿಸಲು ಅವಕಾಶವಿದೆ.

ಸಹಾಯವಾಣಿ ಸಂಖ್ಯೆಗಳು

ಟಿಕೆಟ್ ಮರುಹೊಂದಾಣಿಕೆ ಅಥವಾ ಹಣ ವಾಪಸಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ವಿಮಾನಯಾನ ಸಂಸ್ಥೆಗಳ ಸಹಾಯವಾಣಿಗಳನ್ನು ಸಂಪರ್ಕಿಸಬಹುದು ಅಥವಾ ತಮ್ಮ ನಗರದ ಬುಕಿಂಗ್ ಕಚೇರಿಗಳಿಗೆ ನೇರವಾಗಿ ಭೇಟಿ ನೀಡಬಹುದು. ಏರ್ ಇಂಡಿಯಾ ಪ್ರಯಾಣಿಕರು +91 11 69329333 ಅಥವಾ +91 11 69329999 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕರು +91 124 6935600 ಸಹಾಯವಾಣಿಯ ಮೂಲಕ ನೆರವು ಪಡೆಯಬಹುದಾಗಿದೆ.

Must Read

Skip to toolbar