November 13, 2026
Friday, November 13, 2026
spot_img

ಕುಡಿತದ ಚಟಕ್ಕೆ ಬಲಿಯಾಯ್ತು ತಾಯಿಯ ಜೀವ: ಬುದ್ಧಿ ಹೇಳಿದ್ದಕ್ಕೆ ಹೆತ್ತಮ್ಮನನ್ನೇ ಹೊಡೆದು ಕೊಂ*ದ ಪಾಪಿ ಮಗ

ಹೊಸದಿಗಂತ ವರದಿ ದಾವಣಗೆರೆ:

ಕುಡಿಯದಂತೆ ಬುದ್ಧಿ ಹೇಳಿದ್ದಕ್ಕೆ ಹೆತ್ತ ತಾಯಿಗೆ ಮಗನೊಬ್ಬ ಮರದ ಪಟ್ಟಿಯೊಂದರಿಂದ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ದೊಡ್ಡಘಟ್ಟ ಗ್ರಾಮದಲ್ಲಿ ವರದಿಯಾಗಿದೆ.

ಜಿಲ್ಲೆಯ ಹರಪನಹಳ್ಳಿ ತಾಲೂಕು ಹಾರಕನಾಳ್ ಗ್ರಾಮದ ಬುಳ್ಳಮ್ಮ(75) ಕೊಲೆಯಾದ ತಾಯಿ. ತನ್ನ ಮಗಳ ಮನೆಯಾದ ಚನ್ನಗಿರಿ ತಾಲೂಕು ದೊಡ್ಡಘಟ್ಟ ಗ್ರಾಮದಲ್ಲೇ ಬುಳ್ಳಮ್ಮ ವಾಸವಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ಬುಳ್ಳಮ್ಮನ ಮಗ ಹನುಮಂತ ಕುಡಿದುಕೊಂಡು ತನ್ನ ಸಹೋದರಿ ಮನೆಗೆ ಬಂದಿದ್ದ. ಆಗ ಬುಳ್ಳಮ್ಮ ಕುಡಿಯದಂತೆ ಬುದ್ಧಿ ಹೇಳಿದ್ದರಿಂದ ಆಕ್ರೋಶಗೊಂಡ ಆರೋಪಿ ಹನುಮಂತ ಅಲ್ಲಿಯೇ ಇದ್ದ ಮರದ ಪಟ್ಟಿಯಿಂದ ಬುಳ್ಳಮ್ಮನ ತಲೆಗೆ ಹೊಡೆದಿದ್ದರಿಂದ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ಮಗಳ ಮನೆಗೆ ಕುಡಿದು ಬಂದಿದ್ದ ಹನುಮಂತನಿಗೆ ಬುಳ್ಳಮ್ಮ ಬುದ್ಧಿ ಮಾತು ಹೇಳುತ್ತಿದ್ದ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಆಕ್ರೋಶಗೊಂಡ ಹನುಮಂತ ಅಲ್ಲಿಯೇ ಇದ್ದ ಮರದ ತುಂಡಿನಿಂದ ತನ್ನ ಹೆತ್ತ ತಾಯಿ ಬುಳ್ಳಮ್ಮನ ಮೇಲೆ ಹಲ್ಲೆ ಮಾಡಿದ್ದರಿಂದ ಆಕೆ ಸಾವನ್ನಪ್ಪಿದ್ದಾರೆ.

ಬುಳ್ಳಮ್ಮನನ್ನು ಕೊಂದ ಹನುಮಂತನಿಗೆ ಸಂಬಂಧಿಗಳು, ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಆರೋಪಿ ಹನುಮಂತನಿಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತ ಬುಳ್ಳಮ್ಮನ ಪಾರ್ಥೀವ ಶರೀರವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ, ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Must Read

Skip to toolbar