November 14, 2026
Saturday, November 14, 2026
spot_img

ಬೆಂಗಳೂರಿನಲ್ಲಿ ನ.14ರಂದು 6ನೇ ವರ್ಷದ ಅದ್ದೂರಿ ʼಕಮಲಶಿಲೆ ಯಕ್ಷೋತ್ಸವʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕದ ಶ್ರೀಮಂತ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದ ವೈಭವವನ್ನು ಬೆಂಗಳೂರಿನ ಜನತೆಗೆ ಪರಿಚಯಿಸಲು 6ನೇ ವರ್ಷದ ಅದ್ದೂರಿ ಯಕ್ಷೋತ್ಸವ ಆಯೋಜಿಸಲಾಗಿದೆ. ಬ್ರಾಹ್ಮೀ ಭಕ್ತವೃಂದ ಬೆಂಗಳೂರು, ಅಂಪಾರು ಮಿತ್ರ ಬಳಗದ ಸಹಕಾರದಿಂದ ಕಮಲಶಿಲೆ ಯಕ್ಷೋತ್ಸವ ಕಾರ್ಯಕ್ರಮ ನಡೆಯಲಿದೆ.

ನವೆಂಬರ್‌ 14ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 9.30ಕ್ಕೆ ‘ಕಮಲಶ್ರೀ ಯಕ್ಷೋತ್ಸವ 2026’ ಕಾರ್ಯಕ್ರಮ ಆರಂಭವಾಗಲಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ಪ್ರಸಿದ್ಧ ಯಕ್ಷಗಾನ ಪ್ರಸಂಗಗಳು ಹಾಗೂ ಕಲಾ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ. ಕಾರ್ಯಕ್ರಮದಲ್ಲಿ ವೀರಮಣಿ ಕಾಳಗ, ಕೀಚಕ ವಧೆ, ಹಿರಣ್ಯಾಕ್ಷ ವಧೆ ಹಾಗೂ ಶ್ರೀನಿವಾಸ ಕಲ್ಯಾಣ ಸೇರಿದಂತೆ ವಿವಿಧ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಯಕ್ಷಗಾನದ ಭಾಗವತರಾಗಿ ಮಧುಕರ ಹೆಗ್ಡೆ, ಪವನ್‌ ಆಚಾರ್ಯ ಅರಸಮ್ಮನಕಾನು ಇದ್ದಾರೆ. ಯಕ್ಷೋತ್ಸವಕ್ಕೆ ಪ್ರಭಾಕರ ನಾಗೂರು ಸಂಗೀತ ನೀಡಿದ್ದಾರೆ. ಇನ್ನು ಮದ್ದಳೆ ನಾಗರಾಜ್‌ ಯಡಮೊಗೆ, ಲೋಹಿತ್‌ ಕೊಮೆ ಹಾಗೂ ಚಂಡೆಯನ್ನು ಶ್ರೀನಿವಾಸ್‌ ಪ್ರಭು ಹಾಗೂ ಅಜಿತ್‌ ಆಚಾರ್‌ ಕಾಲ್ಲೋಡು ನುಡಿಸಲಿದ್ದಾರೆ.

ಯಕ್ಷೋತ್ಸವದಲ್ಲಿ ಪಂಜು ಪೂಜಾರಿ ಬಗ್ವಾಡಿ, ಕೃಷ್ಣ ಗಾಡಿಗ, ನಾಗರಾಜ ಪೂಜಾರಿ, ಪ್ರಶಾಂತ ಕೋಟ ಸ್ತ್ರೀ ವೇಷ ಧರಿಸಲಿದ್ದರೆ, ವಿಶ್ವನಾಥ ಬಂಡಾರಿ ಹಾಸ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು, ಸಾಂಪ್ರದಾಯಿಕ ಕಲಾಪ್ರಕಾರಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಬೆಂಗಳೂರಿನ ಕಲಾಭಿಮಾನಿಗಳಿಗೆ ಕರಾವಳಿಯ ಯಕ್ಷಗಾನ ಪರಂಪರೆಯ ಅನುಭವ ಒದಗಿಸುವುದು ಈ ಉತ್ಸವದ ಉದ್ದೇಶವಾಗಿದೆ.

Must Read