ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 24 ಗಂಟೆಗಳಿಗೂ ಹೆಚ್ಚು ಕಾಲ ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಕಂಗೆಡಿಸಿದ್ದ ಮೈಕ್ರೋಸಾಫ್ಟ್ 365 ಸೇವೆಯ ತಾಂತ್ರಿಕ ಅಡಚಣೆ ಕೊನೆಗೂ ಬಗೆಹರಿದಿದೆ. ಔಟ್‌ಲುಕ್, ಟೀಮ್ಸ್ ಮತ್ತು ಕೋಪೈಲಟ್ ಸೇವೆಗಳು ಸಂಪೂರ್ಣವಾಗಿ ಯಥಾಸ್ಥಿತಿಗೆ ಮರಳಿವೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.
ನವೆಂಬರ್ 12ರ ರಾತ್ರಿ 11:24ರ ಸುಮಾರಿಗೆ ಅಮೆರಿಕ ಭಾಗದಲ್ಲಿ ಕಾಣಿಸಿಕೊಂಡ ಈ ಸಮಸ್ಯೆ, ಕೇವಲ 13 ನಿಮಿಷಗಳಲ್ಲಿ ಇಡೀ ಜಗತ್ತಿಗೆ ವ್ಯಾಪಿಸಿತು. ಸುಮಾರು 74 ದೇಶಗಳ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ವಿಮಾನಯಾನ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ದೈನಂದಿನ ಕೆಲಸಗಳು ಅಕ್ಷರಶಃ ಸ್ತಬ್ಧಗೊಂಡವು. ಇ-ಮೇಲ್ ಮತ್ತು ಆನ್‌ಲೈನ್ ಸಭೆಗಳು ಸ್ಥಗಿತಗೊಂಡಿದ್ದರಿಂದ, ಅನಿವಾರ್ಯವಾಗಿ ಅನೇಕ ಕಚೇರಿಗಳು ಮತ್ತೆ ಹಳೇ ಕಾಲದ ಸ್ಥಿರ ದೂರವಾಣಿ, ಕಾಗದದ ಕಡತಗಳು ಹಾಗೂ ಫ್ಯಾಕ್ಸ್ ಯಂತ್ರಗಳ ಮೊರೆ ಹೋಗಬೇಕಾಯಿತು.
ಈ ಬೃಹತ್ ಅಡಚಣೆಯ ಹಿಂದೆ ಸೈಬರ್ ದಾಳಿ ಅಥವಾ ಕೃತಕ ಬುದ್ಧಿಮತ್ತೆಯ ಕೈವಾಡವಿರಬಹುದು ಎಂಬ ವದಂತಿಗಳು ಹರಡಿದ್ದವು. ಆದರೆ, ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಮೈಕ್ರೋಸಾಫ್ಟ್, “ಇದು ಕೇವಲ ಆಂತರಿಕ ತಾಂತ್ರಿಕ ದೋಷವೇ ಹೊರತು, ಯಾವುದೇ ಸೈಬರ್ ದಾಳಿಯಲ್ಲ” ಎಂದು ಸ್ಪಷ್ಟಪಡಿಸಿದೆ.
ಮೊದಲಿಗೆ ಬಳಕೆದಾರರ ದಟ್ಟಣೆ ಹೆಚ್ಚಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಸಂಸ್ಥೆ ಭಾವಿಸಿತ್ತು. ಆದರೆ, ಈ ಹಿಂದೆ ಮಾಡಲಾಗಿದ್ದ ನೆಟ್‌ವರ್ಕ್ ಸಾಮರ್ಥ್ಯದ ಮೇಲ್ದರ್ಜೆ ಮತ್ತು ಇತ್ತೀಚಿನ ಬದಲಾವಣೆಯಿಂದಾಗಿ ಕೆಲವು ಸರ್ವರ್‌ಗಳು ದಿಢೀರ್ ಸ್ಥಗಿತಗೊಂಡಿದ್ದವು. ಇದರಿಂದ ಉಳಿದ ಸರ್ವರ್‌ಗಳ ಮೇಲೆ ಒಂದೇ ಬಾರಿಗೆ ವಿಪರೀತ ಒತ್ತಡ ಬಿದ್ದು, ಸುರಕ್ಷಿತ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಕೈಕೊಟ್ಟಿದ್ದೇ ಈ ಅವಾಂತರಕ್ಕೆ ಮೂಲ ಕಾರಣ ಎಂದು ತಜ್ಞರು ಪತ್ತೆಹಚ್ಚಿದ್ದಾರೆ.
ಸದ್ಯ ಸಮಸ್ಯೆಯನ್ನು ಸಂಪೂರ್ಣವಾಗಿ ಸರಿಪಡಿಸಿ ಸೇವೆಯನ್ನು ಮರುಸ್ಥಾಪಿಸಲಾಗಿದ್ದು, ಬಳಕೆದಾರರಿಗೆ ಆದ ತೀವ್ರ ಅನಾನುಕೂಲಕ್ಕಾಗಿ ಮೈಕ್ರೋಸಾಫ್ಟ್ ಸಂಸ್ಥೆ ತೀವ್ರ ವಿಷಾದ ವ್ಯಕ್ತಪಡಿಸಿದೆ.



