November 14, 2026
Saturday, November 14, 2026
spot_img

ಮೇಕೆದಾಟು ವಿವಾದ: ತಮಿಳುನಾಡು ನಾಯಕರ ವಿರೋಧಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದ ಸಿಎಂ ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಟಾಗೋರ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಂಪೂರ್ಣ ಹಕ್ಕು ಕರ್ನಾಟಕಕ್ಕಿದ್ದು, ತಮಿಳುನಾಡಿನ ರಾಜಕೀಯ ವಿರೋಧಗಳಿಗೆ ತಾವು ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಹೇಳಿದ್ದೇನು?

“ಮೇಕೆದಾಟು ಅಣೆಕಟ್ಟು ನಿರ್ಮಾಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಖಂಡಿಸಿ ಮಾಣಿಕ್ಕಂ ಟಾಗೋರ್ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಯಾರು ಬೇಕಾದರೂ ಖಂಡಿಸಲಿ, ನನಗೆ ಅದರ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ. ಇದು ನನ್ನ ರಾಜ್ಯ, ಇದು ನನ್ನ ಹಕ್ಕು” ಎಂದು ಖಡಕ್ ಆಗಿ ನುಡಿದಿದ್ದಾರೆ.

ತಮಿಳುನಾಡಿನ ನಾಯಕರು ಈ ವಿಚಾರವನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಅವರು, “ಅಲ್ಲಿ ಕಾಂಗ್ರೆಸ್ ವಿರೋಧಿಸದಿದ್ದರೆ ಡಿಎಂಕೆ ವಿರೋಧಿಸುತ್ತದೆ. ಡಿಎಂಕೆ ಸುಮ್ಮನಿದ್ದರೆ ಎಐಎಡಿಎಂಕೆ ವಿರೋಧಿಸುತ್ತದೆ. ಒಟ್ಟಿನಲ್ಲಿ ಎಲ್ಲರೂ ವಿರೋಧಿಸುತ್ತಲೇ ಇರುತ್ತಾರೆ” ಎಂದರು. ಅಲ್ಲದೆ, ತಮಿಳುನಾಡಿನ ನಿಯೋಗವೊಂದು ಮೇಕೆದಾಟು ಪ್ರದೇಶಕ್ಕೆ ಭೇಟಿ ನೀಡಲಿ, ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಹೇಗೆ ಅನುಕೂಲವಾಗಲಿದೆ ಎಂಬುದನ್ನು ತಾವೇ ಖುದ್ದಾಗಿ ವಿವರಿಸುವುದಾಗಿ ಅವರು ಆಹ್ವಾನ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಸಲ್ಲಬೇಕಾದ 177.25 ಟಿಎಂಸಿ ನೀರಿನ ಪಾಲಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

ತಮಿಳುನಾಡು ಕಾಂಗ್ರೆಸ್ ವಿರೋಧವೇಕೆ?

ಇದಕ್ಕೂ ಮುನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಟಾಗೋರ್, ಶಿವಕುಮಾರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಮೇಕೆದಾಟು ಯೋಜನೆಯು ತಮಿಳುನಾಡಿನ ನೀರಿನ ಹಕ್ಕು ಮತ್ತು ಕಾವೇರಿ ಡೆಲ್ಟಾ ಭಾಗದ ರೈತರ ಬದುಕಿಗೆ ಮಾರಕವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸಲು ತಾವು ಯಾವುದೇ ಹಂತದ ಹೋರಾಟಕ್ಕೂ ಸಿದ್ಧವಿದ್ದು, ಈ ಯೋಜನೆಗೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದರು.

ಏನಿದು ಮೇಕೆದಾಟು ಯೋಜನೆ?

ಕರ್ನಾಟಕದ ಕನಕಪುರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನ ಜಲಾಶಯವನ್ನು ನಿರ್ಮಿಸುವುದು ಈ ಯೋಜನೆಯ ಗುರಿಯಾಗಿದೆ. ಬೆಂಗಳೂರಿನ ಕುಡಿಯುವ ನೀರಿನ ದಾಹವನ್ನು ನೀಗಿಸುವುದು ಮತ್ತು ಸುಮಾರು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಹೆಚ್ಚುವರಿ ನೀರನ್ನು ಸಂಗ್ರಹಿಸಿ, ಸಂಕಷ್ಟದ ಸಮಯದಲ್ಲಿ ನೀರಿನ ಹರಿವನ್ನು ನಿಯಂತ್ರಿಸಲು ಈ ಅಣೆಕಟ್ಟು ನೆರವಾಗಲಿದೆ ಎಂಬುದು ಕರ್ನಾಟಕದ ವಾದವಾಗಿದೆ. ಆದರೆ, ಕಾವೇರಿ ಕಣಿವೆಯ ಇತರ ರಾಜ್ಯಗಳ ಒಪ್ಪಿಗೆಯಿಲ್ಲದೆ ಕರ್ನಾಟಕ ಈ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ ಮತ್ತು ಇದರಿಂದ ತಮಿಳುನಾಡಿಗೆ ಬರುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ತಮಿಳುನಾಡಿನ ಆಕ್ಷೇಪವಾಗಿದೆ.

Must Read

Skip to toolbar