ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುವಾಹಟಿಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಾಯಿಗೆ ಚಾಕುವಿನಿಂದ ಇರಿದು, ಬಳಿಕ ಬಹುಮಹಡಿ ಕಟ್ಟಡವೊಂದರ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಸ್ಸಾಂನ ಗುವಾಹಟಿಯಲ್ಲಿರುವ ಖಾಸಗಿ ಶಾಲೆಯೊಂದರ ಈ ವಿದ್ಯಾರ್ಥಿ, ಶುಕ್ರವಾರ ರಾತ್ರಿ ಬಮುನಿಮೈದಾಂ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ತಾಯಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾನೆ. ಇದರಿಂದ ಆಕೆಯ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತಾಯಿ ಕತ್ತಿಗೆ ಚೂರಿಯಿಂದ ಇರಿದ ನಂತರ ಬಾಲಕನಿಗೆ ಏನು ಮಾಡಲಿ ಗೊತ್ತಾಗದೇ ಹೆದರಿದ್ದಾನೆ. ಘಟನೆಯ ನಂತರ ಮನೆಯಿಂದ ಹೊರಬಂದ ಆ ಬಾಲಕ, ತನ್ನ ಶಾಲೆಯ ವಾಟ್ಸಾಪ್ ಗ್ರೂಪ್ ನಲ್ಲಿ ಈ ದಾಳಿಯ ಬಗ್ಗೆ ಬರೆದಿದ್ದಾನೆ. ಅಲ್ಲದೆ, ತನ್ನ ಮನೆ ಎಲ್ಲಿದೆ ಎಂದು ಪತ್ತೆಹಚ್ಚಿ, ಗಾಯಗೊಂಡಿರುವ ತನ್ನ ತಾಯಿಗೆ ಸಹಾಯ ಮಾಡುವಂತೆ ಇತರರಲ್ಲಿ ಕೇಳಿಕೊಂಡಿದ್ದಾನೆ. ಅದಕ್ಕೆ ರಿಪ್ಲೇ ಬರುವವರೆಗೆ ಕಾಯಲು ಹೆದರಿದ ಬಾಲಕ ತಾಯಿಯನ್ನು ಕೊಂದೆ ಎನ್ನುವ ಭಯದಲ್ಲಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಂತರ ನಗರದ ಎಬಿಸಿ ಪ್ರದೇಶಕ್ಕೆ ತೆರಳಿದ ಆತ, ಅಲ್ಲಿನ ಕಟ್ಟಡವೊಂದರ ಮೇಲ್ಛಾವಣಿಯಿಂದ ಜಿಗಿದಿದ್ದಾನೆ. ಗಾಯಗೊಂಡ ಮಹಿಳೆಯನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಕುವಿನಿಂದ ಇರಿಯಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.



