November 14, 2026
Saturday, November 14, 2026
spot_img

‘ಮೋದಿ ಫೋನ್ ಕದ್ದಾಲಿಕೆ ಮಾಡುತ್ತಾರೆಂಬ ಆರೋಪ ನಂಬಲ್ಲ’: ರಾಹುಲ್ ಹೇಳಿಕೆಗೆ ಸ್ಯಾಮ್ ಪಿತ್ರೋಡಾ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಫೋನ್ ಕದ್ದಾಲಿಕೆ ಆರೋಪ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ರಾಹುಲ್ ಗಾಂಧಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ಪ್ರಧಾನಿ ಮೋದಿ ವೈಯಕ್ತಿಕವಾಗಿ ಫೋನ್ ಟ್ಯಾಪಿಂಗ್ ಮಾಡುತ್ತಾರೆ ಎಂಬುದನ್ನು ತಾನು ನಂಬುವುದಿಲ್ಲ ಎಂದು ಹೇಳಿದ್ದಾರೆ.

ಮೋದಿ ಫೋನ್ ಟ್ಯಾಪ್ ಮಾಡಲ್ಲ

ಪ್ರಧಾನಿ ಮೋದಿ ಹಾಗೆ ಮಾಡುವುದಿಲ್ಲ. ಅವರು ಸ್ಕ್ರೂಡ್ರೈವರ್ ಹಿಡಿದು ಕಂಪ್ಯೂಟರ್ ಬಳಿ ಕುಳಿತುಕೊಂಡು ಫೋನ್ ಕದ್ದಾಲಿಕೆ ಮಾಡುವುದಿಲ್ಲ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಭಿನ್ನವಾದ ನಿಲುವು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ನನ್ನ ಫೋನ್ ಮೇಲೆಯೂ ನಿಗಾ ಇದೆ

ವೈಯಕ್ತಿಕ ಅನುಭವದ ಬಗ್ಗೆಯೂ ಪಿತ್ರೋಡಾ ಮಾತನಾಡಿದ್ದು, ತಮ್ಮ ಸ್ವಂತ ಫೋನ್ ಮತ್ತು ಡಿಜಿಟಲ್ ಸಾಧನಗಳ ಮೇಲೆ ನಿಗಾ ಇರಿಸಲಾಗಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಫೋನ್ ಟ್ಯಾಪ್ ಆಗುತ್ತಿದೆ, ಲ್ಯಾಪ್‌ಟಾಪ್ ಮೇಲೆ ಸೈಬರ್ ದಾಳಿ ನಡೆಯುತ್ತಿದೆ ಹಾಗೂ ಬ್ಯಾಂಕ್ ಖಾತೆಗಳ ಮೇಲೂ ನಿಗಾ ಇರಿಸಲಾಗಿದೆ ಎಂದು ಹೇಳಿದ್ದಾರೆ. ತಜ್ಞರು ತಮ್ಮ ಸಾಧನಗಳನ್ನು ಪರಿಶೀಲಿಸಿದ ಬಳಿಕ ಎಚ್ಚರಿಕೆ ನೀಡಿದ್ದಾರೆ ಎಂದೂ ತಿಳಿಸಿದ್ದಾರೆ. ಆದರೆ, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಬಹಿರಂಗ ಚರ್ಚೆಗೆ ಮೋದಿಗೆ ರಾಹುಲ್ ಸವಾಲು

ಇದಕ್ಕೂ ಮುನ್ನ ರಾಹುಲ್ ಗಾಂಧಿ, ಪ್ರಧಾನಿ ಮೋದಿ ತಮ್ಮ ಫೋನ್ ಕದ್ದಾಲಿಕೆ ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಯಾರು ಇದ್ದಾರೆ ಎಂಬುದರ ಕುರಿತು ಪ್ರಧಾನಿ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಬೇಕು ಎಂದೂ ಸವಾಲು ಹಾಕಿದ್ದರು.

ರಾಹುಲ್ ಆರೋಪವನ್ನು ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ. ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ರಾಹುಲ್ ಗಾಂಧಿ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಟೀಕಿಸಿದ್ದಾರೆ. ಅವರ ಫೋನ್ ಕದ್ದಾಲಿಕೆ ಮಾಡಲು ಯಾರಿಗೂ ಆಸಕ್ತಿಯಿಲ್ಲ ಎಂದೂ ವ್ಯಂಗ್ಯವಾಡಿದ್ದಾರೆ.

Must Read

Skip to toolbar