November 14, 2026
Saturday, November 14, 2026
spot_img

ಗಾಂಧಿ ಕುಟುಂಬದ ವಿರುದ್ಧ ಪೋಸ್ಟ್‌ ವಿವಾದ: ನಟಿ ಕಂಗನಾ ರಣಾವತ್ ವಿರುದ್ಧ FIR ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕಂಗನಾ ರಣಾವತ್ ಅವರ ಹೇಳಿಕೆಗಳು ಪ್ರಚೋದನಕಾರಿಯಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ನವೆಂಬರ್ 13ರಂದು ಶಿಮ್ಲಾದಲ್ಲಿ ನಿವೃತ್ತ ಕ್ಯಾಪ್ಟನ್ ಅತುಲ್ ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ನವೆಂಬರ್ 10ರಂದು ಕಂಗನಾ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.

ಏನಿದೆ ಪೋಸ್ಟ್ ನಲ್ಲಿ?

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಅವರ ಪುತ್ರರಾದ ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಾವಿನ ಘಟನೆಗಳನ್ನು ಉಲ್ಲೇಖಿಸಿ ಪೋಸ್ಟ್‌ನಲ್ಲಿ ಪ್ರಚೋದನಕಾರಿ ಆರೋಪಗಳನ್ನು ಮಾಡಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

‘ನಾನು ‘ಎಮರ್ಜೆನ್ಸಿ’ ಸಿನಿಮಾಗಾಗಿ ಭಾರತೀಯ ರಾಜಕೀಯ ಮತ್ತು ಗಾಂಧಿ ಕುಟುಂಬದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಆದರೆ ನನಗೆ ಇಂದಿಗೂ ಅರ್ಥವಾಗದ ಒಂದು ವಿಷಯವನ್ನು ನಾನು ಒಪ್ಪಿಕೊಳ್ಳಲೇಬೇಕು’. ‘ಒಬ್ಬ ನಿಗೂಢ ವಿದೇಶಿ ಪ್ರಜೆ (ಸೋನಿಯಾ ಗಾಂಧಿ) ಗಾಂಧಿ ಕುಟುಂಬವನ್ನು ಪ್ರವೇಶಿಸುತ್ತಾರೆ. ಆನಂತರ ಇಂದಿರಾ ಗಾಂಧಿ ಹತ್ಯೆಯಾಗುತ್ತಾರೆ. ಬಳಿಕ ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಹೀಗೆ ಅಧಿಕಾರ ವಹಿಸಿಕೊಳ್ಳಬೇಕಿದ್ದ ಎಲ್ಲ ಸಂಭಾವ್ಯ ಉತ್ತರಾಧಿಕಾರಿಗಳು ಕೊಲ್ಲಲ್ಪಡುತ್ತಾರೆ. ಕೊನೆಗೆ ಅನುಕಂಪದ ಆಧಾರದ ಮೇಲೆ ಸಿಂಹಾಸನಕ್ಕೆ ಉಳಿದಿದ್ದು ಒಬ್ಬರೇ ಆಯ್ಕೆ. ಅವರೇ ಸೋನಿಯಾ ಗಾಂಧಿ ಎಂಬ ವಿದೇಶಿ ಪ್ರಜೆ’ ಎಂದಿದ್ದರು ಕಂಗನಾ.

https://www.instagram.com/p/DfjwU08D1JB/?utm_source=ig_embed&ig_rid=AQD1P7rhk7wn2V6obPvk2l7

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ‘ನಿಗೂಢ ವಿದೇಶಿ ಪ್ರಜೆ’ ಎಂದು ಬಿಂಬಿಸಿರುವುದಕ್ಕೂ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂಜಯ್ ಗಾಂಧಿ ಅವರ ನಿಧನದ ಬಳಿಕ ಮೇನಕಾ ಗಾಂಧಿ ಕುಟುಂಬದ ಮನೆಯಿಂದ ಹೊರಬಂದ ವಿಚಾರವನ್ನೂ ಪೋಸ್ಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ ನಿರೂಪಣೆ ರಾಜಕೀಯ ಟೀಕೆಯ ಮಿತಿಯನ್ನು ಮೀರಿ ವಿವಿಧ ಸಮುದಾಯಗಳ ನಡುವೆ ದ್ವೇಷ ಮತ್ತು ಸಾರ್ವಜನಿಕ ಅಶಾಂತಿಗೆ ಕಾರಣವಾಗಬಹುದು ಎಂದು ದೂರುದಾರರು ಆರೋಪಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196(1)(b), 353(2) ಮತ್ತು 356(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ ಎಫ್‌ಐಆರ್ ದಾಖಲಾಗಿರುವುದನ್ನು ಖಚಿತಪಡಿಸಿದ್ದು, ತನಿಖೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

Must Read

Skip to toolbar