November 14, 2026
Saturday, November 14, 2026
spot_img

ನಿದ್ರೆ ಮಾತ್ರೆ ನೀಡಿ ವೃದ್ಧೆಯ ಭೀಕರ ಹ*ತ್ಯೆಗೈದು ಚಿನ್ನಾಭರಣ ದೋಚಿದ್ದ ಆರೋಪಿ ಕೊನೆಗೂ ಲಾಕ್

ಹೊಸದಿಗಂತ ವರದಿ ಮುಂಡಗೋಡ:

ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ 75 ವರ್ಷದ ವೃದ್ಧೆ ಕಮಲವ್ವ ತಿರಕಪ್ಪ ಅಡೂರ ಅವರನ್ನು ನಿದ್ರೆ ಮಾತ್ರೆ ನೀಡಿ ಭೀಕರವಾಗಿ ಹತ್ಯೆ ಮಾಡಿ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಮುಂಡಗೋಡ ಪೊಲೀಸರು ಸವಣೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಆಲಳ್ಳಿ ಗ್ರಾಮದ ನಿವಾಸಿ ಮಾರುತಿ ಅಡಿವೆಪ್ಪ ಮುಡಸಾಲಿ (33) ಬಂಧಿತ ಆರೋಪಿ. ಈತನಿಂದ ಮೃತ ವೃದ್ಧೆಗೆ ಸೇರಿದ 25ಗ್ರಾಂ ಬಂಗಾರದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ

ಕಳೆದ ಅಕ್ಟೋಬರ್ 25ರಂದು ಆಲಳ್ಳಿ ಗ್ರಾಮದ ವೃದ್ಧೆ ಕಮಲವ್ವ ಅವರ ಶವ ಮನೆಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಮೃತಳ ಮೈಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಇಲ್ಲದ ಕಾರಣ ಇದೊಂದು ಆಕಸ್ಮಿಕ ಸಾವೋ ಅಥವಾ ಕೊಲೆಯೋ ಎಂಬ ಸಂಶಯ ಮೂಡಿತ್ತು. ಆದರೆ, ಮೃತದೇಹ ವಿವಸ್ತ್ರ ಸ್ಥಿತಿಯಲ್ಲಿದ್ದು, ಮನೆಯಲ್ಲಿದ್ದ 25 ಗ್ರಾಂ ಬಂಗಾರ ಹಾಗೂ 1, 70 ಲಕ್ಷ ರೂ ನಗದು ಕಳುವಾಗಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.

ಈ ಪ್ರಕರಣ ದಾಖಲಾಗುವ ಮೊದಲು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ಸಿಸಿಟಿವಿ ದೃಶ್ಯಾವಳಿಗಳಾಗಲಿ ಅಥವಾ ಸಿಡಿಆರ್ ತಾಂತ್ರಿಕ ಸಾಕ್ಷ್ಯಾಧಾರಗಳಾಗಲಿ ಲಭ್ಯವಿರಲಿಲ್ಲ. ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪೊಲೀಸರು ಅತೀ ಚಾಣಾಕ್ಷತನದಿಂದ ತನಿಖೆ ಮುಂದುವರಿಸಿದ್ದರು.

ಶಿರಸಿ ಉಪವಿಭಾಗದ ಅಧಿಕಾರಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳ ತಂಡವು ಆರೋಪಿಯ ಪತ್ತೆ ಕಾರ್ಯದಲ್ಲಿದ್ದಾಗ, ಶುಕ್ರವಾರ ಸಂಜೆ ಸವಣೂರಿನಲ್ಲಿ ಆರೋಪಿ ಮಾರುತಿಯನ್ನು ವಶಕ್ಕೆ ಪಡೆದು ಮುಂಡಗೋಡ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಲಾಯಿತು. ಈ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ. ಮೃತಳ ಮೈಮೇಲಿನ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.

ಕುಡಿದ ಮತ್ತಿನಲ್ಲಿ ಬಾಯ್ಬಿಟ್ಟ ಸತ್ಯ

ವೃದ್ಧೆಯೊಂದಿಗೆ ಸಲುಗೆಯಿಂದಿದ್ದ ಆರೋಪಿ ಮಾರುತಿ, ಹಣ ಮತ್ತು ಚಿನ್ನಾಭರಣ ದೋಚುವ ದುರುದ್ದೇಶದಿಂದ ರಾತ್ರಿ ವೇಳೆ ವೃದ್ಧೆಗೆ ಬಲವಂತವಾಗಿ ನಿದ್ರೆ ಮಾತ್ರೆಗಳನ್ನು ನುಂಗಿಸಿ ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ಮರುದಿನ ಬೆಳಿಗ್ಗೆ ಪಕ್ಕದ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ “ಅಜ್ಜಿಯನ್ನು ಕೊಲೆ ಮಾಡಿದ್ದು ನಾನೇ” ಎಂದು ಬಾಯ್ಬಿಟ್ಟು ಎಂದು‌ ತಿಳಿದುಬಂದಿದೆ. ತಕ್ಷಣವೇ ಗ್ರಾಮದಿಂದ ನಾಪತ್ತೆಯಾಗಿದ್ದನ್ನು ಎನ್ನಲಾಗಿದೆ.

ಇದನ್ನೂ ಓದಿ:

ಮೂಡಿದ ಹಲವು ಅನುಮಾನಗಳು

 ಚಿನ್ನಾಭರಣ ಹಾಗೂ ಹಣಕ್ಕಾಗಿ ವೃದ್ಧೆಗೆ ನಿದ್ರೆ ಮಾತ್ರೆ ನೀಡಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದರೂ, ಕೃತ್ಯದ ಬಳಿಕ ವೃದ್ಧೆಯ ಮೈಮೇಲಿದ್ದ ಸೀರೆಯನ್ನು ಬಿಚ್ಚಿ ವಿವಸ್ತ್ರಗೊಳಿಸಿದ್ದೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್. ಎಎಸ್ಪಿ ಕೃಷ್ಣಮೂರ್ತಿ ಜಿ.  ಡಿಎಸ್‌ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಂತೆ, ಸಿಪಿಐ ರಮೇಶ್ ಹೆಚ್. ಹಾನಾಪುರ, ಒ ಪಿಎಸ್‌ಐ ಮಂಜುನಾಥ ಗೌಡರ, ತನಿಖಾ ಪಿಎಸ್‌ಐ ರವೀಂದ್ರ ಬಿರಾದರ, ಪಿಎಸ್‌ಐ ನಿಂಗರಾಜ ಕರಡಿಗುಡ್ಡಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಅಲ್ಲದೆ, ಬಸವರಾಜ ಹಗರಿ, ಕೋಟ್ರೇಶ ನಾಗರವಳ್ಳಿ ಬಸವರಾಜ ಮ್ಯಾಗೇರಿ, ಅಣ್ಣಪ್ಪ ಬುಡಗೇರಿ, ತಿರುಪತಿ ಚೌಡಣ್ಣನವರ ಹಾಗೂ ಸಿ ಬಸವರಾಜ ಮಾಳಪ್ಪನವರ ಸೇರಿದಂತೆ ಇತರರು ಕಾರ್ಯಚರಣೆಯಲ್ಲಿದ್ದರು.

Must Read

Skip to toolbar