November 14, 2026
Saturday, November 14, 2026
spot_img

ಟ್ರಂಪ್-ಕ್ಸಿ ಭೇಟಿಗೆ ವೇದಿಕೆ ಸಿದ್ಧ: ವಾಣಿಜ್ಯ ಬಿಕ್ಕಟ್ಟು ಶಮನಕ್ಕೆ ಮುಂದಾದ ಅಮೆರಿಕ, ಚೀನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಬಹುನಿರೀಕ್ಷಿತ ಭೇಟಿಗೂ ಮುನ್ನ, ವಿಶ್ವದ ಎರಡು ಬೃಹತ್ ಆರ್ಥಿಕತೆಗಳ ನಡುವಿನ ವಾಣಿಜ್ಯ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಶುಕ್ರವಾರ ನಡೆದ ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರ ಮಂಡಳಿಯ ಮೊದಲ ವರ್ಚುವಲ್ ಸಭೆಯಲ್ಲಿ, ತಲಾ 30 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಮೇಲಿನ ಸುಂಕವನ್ನು ಪರಸ್ಪರ ಕಡಿತಗೊಳಿಸುವ ಕುರಿತು ಗಂಭೀರ ಚರ್ಚೆ ನಡೆದಿದೆ.

ವಾಣಿಜ್ಯ ಸಮರಕ್ಕೆ ಬ್ರೇಕ್ ಹಾಕುವ ಪ್ರಯತ್ನ

ಮುಂದಿನ ಗುರುವಾರ ಚೀನಾದ ಶೆನ್‌ಜೆನ್‌ನಲ್ಲಿ ನಡೆಯಲಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯಲ್ಲಿ ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಮುಖಾಮುಖಿಯಾಗಲಿದ್ದಾರೆ. ಈ ಐತಿಹಾಸಿಕ ಭೇಟಿಗೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಬಗ್ಗೆ ಮುಕ್ತ ಹಾಗೂ ರಚನಾತ್ಮಕ ಮಾತುಕತೆ ನಡೆದಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ತಿಳಿಸಿದೆ. ಗೌರವ ಮತ್ತು ನ್ಯಾಯಯುತ ನೀತಿಗಳ ಆಧಾರದ ಮೇಲೆ ವ್ಯಾಪಾರ ಘರ್ಷಣೆಯನ್ನು ಕಡಿಮೆ ಮಾಡಲು ಉಭಯ ದೇಶಗಳು ಒಲವು ತೋರಿವೆ.

ಟ್ರಂಪ್, ಕ್ಸಿ, ಪುಟಿನ್ ಐತಿಹಾಸಿಕ ತ್ರಿಪಕ್ಷೀಯ ಸಭೆ

ವ್ಯಾಪಾರ ಮಾತುಕತೆಯ ಜೊತೆಗೆ ಜಾಗತಿಕ ರಾಜಕೀಯ ವಲಯದಲ್ಲಿ ಮತ್ತೊಂದು ಬೃಹತ್ ಬೆಳವಣಿಗೆಯಾಗಲಿದೆ. ಮುಂದಿನ ವಾರ ಚೀನಾದಲ್ಲಿ ನಡೆಯಲಿರುವ APEC ಶೃಂಗಸಭೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್, ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇದೇ ಮೊದಲ ಬಾರಿಗೆ ಒಟ್ಟಾಗಿ ತ್ರಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ:

ಸಭೆಯ ಪ್ರಮುಖ ಅಂಶಗಳು

ಜಾಗತಿಕ ಮಟ್ಟದಲ್ಲಿ ಪರಮಾಣು ಅಸ್ತ್ರಗಳ ಪ್ರಸರಣವನ್ನು ತಡೆಯುವುದು ಮತ್ತು ಇರಾನ್ ಬಿಕ್ಕಟ್ಟಿನ ಕುರಿತು ಈ ಮೂವರು ನಾಯಕರು ಚರ್ಚಿಸಲಿದ್ದಾರೆ. ಅಮೆರಿಕ ಮತ್ತು ರಷ್ಯಾ ನಡುವಿನ ಪರಮಾಣು ಶಸ್ತ್ರಾಸ್ತ್ರ ಒಪ್ಪಂದ ಫೆಬ್ರವರಿಯಲ್ಲಿ ಮುಕ್ತಾಯಗೊಂಡಿರುವುದರಿಂದ ಈ ಚರ್ಚೆ ಮಹತ್ವ ಪಡೆದಿದೆ.

ಈ ತ್ರಿಪಕ್ಷೀಯ ಸಭೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕುರಿತು ಟ್ರಂಪ್ ಚರ್ಚಿಸುವುದಿಲ್ಲ ಎಂದು ಶ್ವೇತಭವನದ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲದೆ, ಪುಟಿನ್ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆ ನಿಗದಿಯಾಗಿಲ್ಲ.

ಟ್ರಂಪ್ ಅವರ ಚೀನಾ ಪ್ರವಾಸದ ಕೆಲವು ಭಾಗಗಳಲ್ಲಿ ಉದ್ಯಮಿ ಎಲಾನ್ ಮಸ್ಕ್ ಕೂಡ ಜೊತೆಯಾಗಲಿದ್ದಾರೆ. ಆದರೆ, ಅವರು ತ್ರಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ.

ಟ್ರಂಪ್ ಏಷ್ಯಾ ಪ್ರವಾಸದ ವೇಳಾಪಟ್ಟಿ

ಸೋಮವಾರ ಮನಿಲಾಗೆ ಭೇಟಿ ನೀಡಲಿರುವ ಟ್ರಂಪ್, ಅಲ್ಲಿ ಆಸಿಯಾನ್ (ASEAN) ಶೃಂಗಸಭೆಯಲ್ಲಿ ಭಾಗವಹಿಸಿ ಫಿಲಿಪೈನ್ಸ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಚೀನಾದ ಶೆನ್‌ಜೆನ್‌ಗೆ ತೆರಳಿ APEC ಶೃಂಗಸಭೆ, ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಭೋಜನಕೂಟ ಹಾಗೂ ಪುಟಿನ್ ಜೊತೆಗಿನ ತ್ರಿಪಕ್ಷೀಯ ಸಭೆಯೊಂದಿಗೆ ತಮ್ಮ ಏಷ್ಯಾ ಪ್ರವಾಸವನ್ನು ಮುಕ್ತಾಯಗೊಳಿಸಲಿದ್ದಾರೆ.

Must Read

Skip to toolbar