November 15, 2026
Sunday, November 15, 2026
spot_img

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತ: 17 ಕಡೆ ಅಪಾಯದ ಮಟ್ಟ ಮೀರಿದ ಮಾಲಿನ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮುಂದುವರಿದಿದ್ದು, ಇಡೀ ನಗರದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಶನಿವಾರ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 367ಕ್ಕೆ ದಾಖಲಾಗಿದ್ದು, ‘ಅತ್ಯಂತ ಕಳಪೆ’ ಹಂತದಲ್ಲೇ ಮುಂದುವರಿದಿದೆ. ಆತಂಕಕಾರಿ ವಿಷಯವೆಂದರೆ, ನಗರದ ಕನಿಷ್ಠ 17 ಪ್ರಮುಖ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ‘ತೀವ್ರ’ ಅಪಾಯಕಾರಿ ಮಟ್ಟವನ್ನು ತಲುಪಿದೆ.

ಮಳೆಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಭೀತಿ


ಭಾನುವಾರ ದೆಹಲಿಯ ಕೆಲವೆಡೆ ತುಂತುರು ಅಥವಾ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಈ ಮಳೆಯಿಂದ ಮಾಲಿನ್ಯ ಕಡಿಮೆಯಾಗುತ್ತದೆ ಎಂಬ ನಿರೀಕ್ಷೆ ಬೇಡ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಫಾರ್ (SAFAR) ಸಂಸ್ಥಾಪಕ ಗುಫ್ರಾನ್ ಬೀಗ್, “ಚಳಿಗಾಲದಲ್ಲಿ ಬೀಳುವ ಹಗುರ ಮಳೆಯು ವಾತಾವರಣದಲ್ಲಿರುವ ಮಾಲಿನ್ಯಕಾರಕಗಳನ್ನು ತೊಳೆದುಹಾಕಲು ಸಾಕಾಗುವುದಿಲ್ಲ. ಬದಲಾಗಿ, ಗಾಳಿಯಲ್ಲಿ ತೇವಾಂಶ ಹೆಚ್ಚಾಗಿ ರಾಸಾಯನಿಕ ಕ್ರಿಯೆಗಳು ನಡೆಯುವುದರಿಂದ ಮಾಲಿನ್ಯದ ತೀವ್ರತೆ ಮತ್ತಷ್ಟು ಹೆಚ್ಚಾಗಬಹುದು. ಜೋರು ಮತ್ತು ನಿರಂತರ ಮಳೆಯಾದರೆ ಮಾತ್ರ ಗಾಳಿ ಶುದ್ಧವಾಗಲು ಸಾಧ್ಯ” ಎಂದು ಸ್ಪಷ್ಟಪಡಿಸಿದ್ದಾರೆ. ವಾಯು ಗುಣಮಟ್ಟ ಮುನ್ನೆಚ್ಚರಿಕಾ ವ್ಯವಸ್ಥೆಯ ಪ್ರಕಾರ, ಮಂಗಳವಾರದವರೆಗೂ ದೆಹಲಿಯ ಗಾಳಿಯ ಗುಣಮಟ್ಟ ಹೀಗೆಯೇ ಮುಂದುವರಿಯಲಿದೆ.

ಎಲ್ಲೆಲ್ಲಿ ಎಷ್ಟಿದೆ ಮಾಲಿನ್ಯ?

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ವರದಿಯಂತೆ, ಶನಿವಾರ ಸಂಜೆ 4 ಗಂಟೆಗೆ ಐಐಟಿ-ದೆಹಲಿ ಮತ್ತು ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್‌ನಲ್ಲಿ ಅತಿ ಹೆಚ್ಚು ಅಂದರೆ 439 AQI ದಾಖಲಾಗಿದೆ. ಉಳಿದಂತೆ ಐಟಿಒ (435), ನರೇಲಾ (433), ಪೂಸಾ (431), ಬುರಾರಿ ಕ್ರಾಸಿಂಗ್ (431), ಡಿಟಿಯು (422), ಜೆಎನ್‌ಯು (415), ದ್ವಾರಕಾ (413), ಜಾಫರ್‌ಪುರ (412), ಕಾಮನ್‌ವೆಲ್ತ್ ಕ್ರೀಡಾ ಸಂಕೀರ್ಣ (411), ಪಂಜಾಬಿ ಬಾಗ್ (409), ಬವಾನಾ (408), ಮಥುರಾ ರಸ್ತೆ (403), ಜಹಾಂಗೀರ್‌ಪುರಿ (401) ಮತ್ತು ಲಜಪತ್ ನಗರದ ವಿವೇಕ್ ವಿಹಾರ್‌ನಲ್ಲಿ (401) ಗಾಳಿಯು ಅತ್ಯಂತ ವಿಷಪೂರಿತವಾಗಿದೆ. ನವೆಂಬರ್ ತಿಂಗಳಲ್ಲಿ ಇದುವರೆಗೆ 12 ದಿನ ‘ಅತ್ಯಂತ ಕಳಪೆ’ ಮತ್ತು 2 ದಿನ ‘ಕಳಪೆ’ ಗಾಳಿ ದಾಖಲಾಗಿದೆ.

ಮಾಲಿನ್ಯದಿಂದ ಮಧುಮೇಹದ ಅಪಾಯ ಹೆಚ್ಚಳ

ಇದೇ ವೇಳೆ, ‘ಜರ್ನಲ್ ಆಫ್ ವ್ಯಾಸ್ಕುಲರ್ ಡಿಸೀಸಸ್’ನಲ್ಲಿ ಪ್ರಕಟವಾದ ಮಹತ್ವದ ಆರೋಗ್ಯ ಅಧ್ಯಯನವೊಂದು ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಸೂಕ್ಷ್ಮ ಮಾಲಿನ್ಯ ಕಣಗಳಿಗೆ ದೀರ್ಘಕಾಲದವರೆಗೆ ತೆರೆದುಕೊಳ್ಳುವುದರಿಂದ ಟೈಪ್-2 ಮಧುಮೇಹ ಬರುವ ಅಪಾಯ ಶೇ. 10 ರಿಂದ 16ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ವಿಶ್ವದಾದ್ಯಂತ 20 ಕೋಟಿಗೂ ಹೆಚ್ಚು ಜನರ ದತ್ತಾಂಶವನ್ನು ವಿಶ್ಲೇಷಿಸಿರುವ ಈ ಅಧ್ಯಯನದ ಪ್ರಕಾರ, ವಾಯುಮಾಲಿನ್ಯವು ಕೇವಲ ಶ್ವಾಸಕೋಶ ಮತ್ತು ಹೃದಯಕ್ಕೆ ಮಾತ್ರವಲ್ಲದೆ, ದೇಹದ ಚಯಾಪಚಯ ಕ್ರಿಯೆಯ ಮೇಲೂ ಗಂಭೀರ ದುಷ್ಪರಿಣಾಮ ಬೀರುತ್ತದೆ. ದೆಹಲಿಯ ಫೋರ್ಟಿಸ್ ಸಿ-ಡಾಕ್ ಆಸ್ಪತ್ರೆಯ ಡಾ. ಅನೂಪ್ ಮಿಶ್ರಾ ಸೇರಿದಂತೆ ಹಲವು ತಜ್ಞರು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು.

Must Read

Skip to toolbar