ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಮಹಾಕಾವ್ಯ ‘ರಾಮಾಯಣ: ಪಾರ್ಟ್ 1’ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ನವೆಂಬರ್ 5ರಂದು ವಿಶ್ವದಾದ್ಯಂತ ಭರ್ಜರಿಯಾಗಿ ತೆರೆಕಂಡ ಈ ಸಿನಿಮಾ, ಬಿಡುಗಡೆಯಾದ ಕೇವಲ ಹತ್ತೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನ ಹಳೆಯ ದಾಖಲೆಗಳನ್ನೆಲ್ಲಾ ಅಳಿಸಿಹಾಕಿದೆ.
ಶಾರುಖ್ ಖಾನ್ ಅವರ ‘ಜವಾನ್’ ಹಾಗೂ ರಾಜ್‌ಕುಮಾರ್ ರಾವ್ ಅವರ ‘ಸ್ತ್ರೀ 2’ ಚಿತ್ರಗಳ ಒಟ್ಟಾರೆ ಜೀವಮಾನದ ಗಳಿಕೆಯನ್ನು ‘ರಾಮಾಯಣ’ ಹಿಂದಿಕ್ಕುವ ಮೂಲಕ ಸಿನಿಮಾ ಪಂಡಿತರನ್ನೇ ಬೆರಗುಗೊಳಿಸಿದೆ.
‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ಎರಡನೇ ವಾರಾಂತ್ಯವಾದ ಶನಿವಾರ (ನವೆಂಬರ್ 14) ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬಿದ್ದಿದ್ದಾರೆ. ಹತ್ತನೇ ದಿನವೊಂದರಲ್ಲೇ ಬರೋಬ್ಬರಿ 61.25 ಕೋಟಿ ರೂಪಾಯಿ ಗಳಿಸುವ ಮೂಲಕ ಚಿತ್ರದ ಒಟ್ಟು ಭಾರತೀಯ ಕಲೆಕ್ಷನ್ 673.95 ಕೋಟಿ ರೂಪಾಯಿಗೆ ತಲುಪಿದೆ. ಈ ಮೂಲಕ ‘ಜವಾನ್’ (643.87 ಕೋಟಿ) ಮತ್ತು ‘ಸ್ತ್ರೀ 2’ (625.27 ಕೋಟಿ) ಸಿನಿಮಾಗಳ ಸಾರ್ವಕಾಲಿಕ ಗಳಿಕೆಯನ್ನೇ ಮೀರಿಸಿದೆ. ಇದಕ್ಕೂ ಮುನ್ನವೇ ‘ಪಠಾಣ್’ ಹಾಗೂ ರಣಬೀರ್ ಅವರದ್ದೇ ‘ಅನಿಮಲ್’ ಚಿತ್ರಗಳ ದಾಖಲೆಗಳನ್ನೂ ಈ ಸಿನಿಮಾ ಪುಡಿಗಟ್ಟಿತ್ತು.
ದಸರಾ ಹಬ್ಬದಂದೇ, ಅಂದರೆ ಸಿನಿಮಾ ಬಿಡುಗಡೆಗೆ 15 ದಿನಗಳ ಮುನ್ನವೇ ಟಿಕೆಟ್ ಬುಕಿಂಗ್ ಆರಂಭವಾಗಿತ್ತು. ತೆರೆಕಾಣುವ ಮುನ್ನವೇ ವಿಶ್ವದಾದ್ಯಂತ 200 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿ ದಾಖಲೆ ಬರೆದಿದ್ದವು. ದೀಪಾವಳಿ ರಜಾದಿನಗಳ ಭರ್ಜರಿ ಲಾಭ ಪಡೆದ ಚಿತ್ರವು, ಬಿಡುಗಡೆಯಾದ ಏಳನೇ ದಿನಕ್ಕೆ ಪ್ರತಿಷ್ಠಿತ 500 ಕೋಟಿ ಕ್ಲಬ್ ಸೇರಿಕೊಂಡಿತು.
ವಾಲ್ಮೀಕಿ ಮಹಾಕಾವ್ಯ ಆಧಾರಿತ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅವರ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದು, ಚಿತ್ರದ ಓಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ.



