November 15, 2026
Sunday, November 15, 2026
spot_img

ನಾನು ಯಾವತ್ತಿದ್ರೂ ಅಂಡರ್‌ಡಾಗ್: ಟ್ರೋಲ್‌ಗಳಿಗೆ ಖಡಕ್ ಉತ್ತರ ಕೊಟ್ಟ ನಟ ಧನುಷ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ತಮ್ಮ ಮುಂಬರುವ O.M ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಸುತ್ತ ಹರಿದಾಡುತ್ತಿರುವ ಗಾಳಿಸುದ್ದಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿರುವ ಟ್ರೋಲ್‌ಗಳು ಮತ್ತು ವಿವಾದಗಳ ಬಗ್ಗೆ ಇದೇ ಮೊದಲ ಬಾರಿಗೆ ಧನುಷ್ ಮೌನ ಮುರಿದಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ‘ತೇರೆ ಇಷ್ಕ್ ಮೇ’ ಸಿನಿಮಾದ ಪ್ರಚಾರದ ವೇಳೆ, ಮಹಿಳೆಯೊಬ್ಬರು ಧನುಷ್ ಅವರ ಪ್ಯಾಂಟ್ ಸರಿಪಡಿಸುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಇದನ್ನು ಕಂಡ ನೆಟ್ಟಿಗರು ಧನುಷ್ ಅವರನ್ನು ‘ಅಹಂಕಾರಿ’ ಎಂದು ಟೀಕಿಸಿದ್ದರು. ಈ ಘಟನೆಯ ಬಗ್ಗೆ ವೇದಿಕೆಯಲ್ಲೇ ಸ್ಪಷ್ಟನೆ ನೀಡಿದ ಧನುಷ್, ಸಭಿಕರ ಸಾಲಿನಲ್ಲಿ ಕುಳಿತಿದ್ದ ತಮ್ಮ ವಸ್ತ್ರವಿನ್ಯಾಸಕಿ ಕಾವ್ಯಾ ಶ್ರೀರಾಮ್ ಅವರನ್ನು ಉದ್ದೇಶಿಸಿ ಹಾಸ್ಯಮಯವಾಗಿ ಮಾತನಾಡಿದರು. “ಕಾವ್ಯಾ ಅವರಿಗೆ ತಮ್ಮ ಕೆಲಸದ ಮೇಲೆ ಅಪಾರ ಶ್ರದ್ಧೆ. ಅಂದು ನನ್ನ ಪ್ಯಾಂಟ್ ಮಡಚಿಕೊಂಡಿದ್ದನ್ನು ಕಂಡು, ಸಾರ್ವಜನಿಕ ಸ್ಥಳವೆಂದೂ ನೋಡದೆ ಅವರು ಸರಿಪಡಿಸಿದರು. ನಾನು ಅದನ್ನು ಗಮನಿಸಿರಲಿಲ್ಲ, ಆದರೆ ಜನ ನನ್ನನ್ನು ಅಹಂಕಾರಿ ಎಂದರು. ಕಾವ್ಯಾ, ದಯವಿಟ್ಟು ನಿಮ್ಮ ಕೆಲಸದ ಹೊರೆಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ” ಎಂದು ನಗುತ್ತಲೇ ಹೇಳುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದರು.

ಸೋಶಿಯಲ್ ಮೀಡಿಯಾದಲ್ಲಿ ನಡೆಯುವ ಫ್ಯಾನ್ ವಾರ್ ಮತ್ತು ಟ್ರೋಲ್‌ಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತವೆಯೇ ಎಂಬ ನಿರೂಪಕರ ಪ್ರಶ್ನೆಗೆ ಧನುಷ್ ಅತ್ಯಂತ ಪ್ರಾಮಾಣಿಕವಾಗಿ ಉತ್ತರಿಸಿದರು. “ನನಗೆ ಏನೂ ಅನಿಸುವುದಿಲ್ಲ ಎಂದರೆ ಅದು ಸುಳ್ಳಾಗುತ್ತದೆ. ಖಂಡಿತವಾಗಿಯೂ ಅದು ನನ್ನ ಮೇಲೆ ಪರಿಣಾಮ ಬೀರುತ್ತದೆ ಮತ್ತು ನೋವಾಗುತ್ತದೆ. ಆದರೆ ನಾನು ನನ್ನ ಕೆಲಸದತ್ತ ಮಾತ್ರ ಗಮನ ಹರಿಸುತ್ತೇನೆ, ನನಗೆ ಬೇರೆ ಏನೂ ತಿಳಿದಿಲ್ಲ. ಜನ ಯಾವಾಗಲೂ ಏನಾದರೂ ಮಾತನಾಡುತ್ತಲೇ ಇರುತ್ತಾರೆ, ಅದಕ್ಕೆ ನಾನು ಹೊಂದಿಕೊಳ್ಳುತ್ತೇನೆ” ಎಂದರು.

ತಮ್ಮನ್ನು ತಾವು ‘ಅಂಡರ್‌ಡಾಗ್’ (ಯಾವುದೇ ನಿರೀಕ್ಷೆಯಿಲ್ಲದೆ ಬೆಳೆದು ಬರುವ ವ್ಯಕ್ತಿ) ಎಂದು ಕರೆದುಕೊಂಡ ಧನುಷ್, “ನನ್ನ ಇಡೀ ಜೀವನದಲ್ಲಿ ನಾನು ಅಂಡರ್‌ಡಾಗ್ ಆಗಿಯೇ ಇದ್ದೇನೆ. ಎಲ್ಲಾ ಅಡೆತಡೆಗಳನ್ನು ಮೀರಿ ಗೆದ್ದಾಗ ಸಿಗುವ ಕಿಕ್ ಬೇರೆ. ಹಾಗಾಗಿ ನಾನು ಮೌನವಾಗಿ ನನ್ನ ಕೆಲಸ ಮಾಡುತ್ತಲೇ ಇರುತ್ತೇನೆ” ಎಂದು ಭಾವುಕರಾದರು. ಇದೇ ವೇಳೆ, ತಮ್ಮ ಇಬ್ಬರು ಮಕ್ಕಳು ತಮ್ಮ ಸಿನಿಮಾಗಳನ್ನು ನೋಡಿ ಅತ್ಯಂತ ಕಠಿಣವಾಗಿ ವಿಮರ್ಶೆ ಮಾಡುತ್ತಾರೆ ಎಂಬ ಸ್ವಾರಸ್ಯಕರ ಸಂಗತಿಯನ್ನೂ ಹಂಚಿಕೊಂಡರು.

Must Read

Skip to toolbar